ಚಿತ್ರದುರ್ಗ: ಇಂದಿನ ಮಕ್ಕಳಿಗೆ ಸಂಗೀತದ ಅಭ್ಯಾಸ ಮಾಡಿಸುವುದು ತುಂಬಾ ಅಗತ್ಯವಾಗಿದೆ ಇತ್ತೀಚೆಗೆ ಸಮಾಜದಲ್ಲಿ ಹಿಂಸೆ ಕ್ರೌರ್ಯಗಳೇ ಹೆಚ್ಚಾಗುತ್ತಿರುವ ಕಾಲದಲ್ಲಿ ಸಂಗೀತ ಎಲ್ಲರ ಮನಸ್ಸಿಗೆ ಶಾಂತಿಯನ್ನು ನೀಡಬಲ್ಲದು ಎಂದು ಚಿತ್ರದುರ್ಗದ ಖ್ಯಾತ ಕೊಳಲು ವಾದಕ ಗುರುರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ತುರುವನೂರು ರಸ್ತೆಯ ಶ್ರೀ ವೆಂಕಟೇಶ್ವರ ಸ್ವಾಮಿ ಹೇವಾಲಯದ ಆವರಣದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿರುವ ಮಕ್ಕಳ ಉಚಿತ ಬೇಸಿಗೆ ಶಿಬಿರದ ಏಳನೆಯ ದಿನವಾದ ಮಂಗಳವಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರದ ಮಕ್ಕಳಿಗೆ ಕೊಳಲು ವಾದನದ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು
ಸಂಗೀತ ದೇವರ ಭಾಷೆಯಾಗಿದ್ದು ಸಂಗೀತಕ್ಕೆ ಎಲ್ಲರ ಮನಸ್ಸನ್ನು ಹಿಡಿದಿಡುವ ಶಕ್ತಿ ಇದೆ ಸಂಗೀತದಿಂದಲೇ ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದು ಎಂಬುದು ವೈಜ್ಞಾನಿಕವಾಗಿ ಸಾಭೀತಾಗಿದೆ ಸಂಗೀತ ದೇವ ಗಂಧರ್ವರು ಆಡುವ ಭಾಷೆಯಾಗಿದ್ದು ಇದಕ್ಕೆ ಗಾಂಧರ್ವ ಭಾಷೆ ಎಂದೂ ಕರೆಯಲಾಗುತ್ತದೆ ಸಂಗೀತಾಭ್ಯಾಸವು ಒಬ್ಬ ವ್ಯಕ್ತಿಯನ್ನು ಒಳ್ಳೆಯ ಪೌರನನ್ನಾಗಿ ಬೆಳಸಲು ಸಹಾಯ ಮಾಡುತ್ತದೆ. ಸಂಗೀತದ ಮಾಧುರ್ಯವು ಮಾನವನಲ್ಲಿರುವ ಸಂಕುಚಿತ ಸ್ವಭಾವವನ್ನು ಹೋಗಲಾಡಿಸಿ ಹೃದಯ ವೈಶಾಲ್ಯವನ್ನುಂಟು ಮಾಡುತ್ತದೆ ಎಂದು ತಿಳಿಸಿದರು.
ಮಕ್ಕಳ ಅಪೇಕ್ಷೆಯ ಮೇರೆಗೆ ಕೊಳಲಿನ ನಾದದಿಂದ ಕೆಲವೊಂದು ಗೀತೆಗಳನ್ನು ನುಡಿಸಿ ಮಕ್ಕಳಿಗೆ ಖುಷಿಪಡಿಸಿದರು.
ನಶಿಸಿ ಹೋಗುತ್ತಿರುವ ಕೊಳಲು ವಿದ್ಯೆಯನ್ನು ಎಲ್ಲರೂ ಕಲಿಯುವಂತೆ ಪ್ರೇರೇಪಿಸಿದರು.
ಇದೇ ಸಂಧರ್ಭದಲ್ಲಿ ಶಿಬಿರದ ಆಯೋಜಕ ರವಿ ಕೆ.ಅಂಬೇಕರ್ ಮಾತನಾಡಿ ಟಿವಿ ಮೊಬೈಲ್ ಗಳಲ್ಲಿ ದಿಢೀರ್ ಜನಪ್ರಿಯರಾಗುವ ಧಾವಂತದಲ್ಲಿ ನಮ್ಮ ಸನಾತನ ವಿದ್ಯೆಯಾದ ಕೊಳಲು ವಾದನವನ್ನು ಹೆಚ್ಚಿನ ಜನರು ಕಲಿಯದೆ ಸುಮಧುರ ಸ್ವರ ಹೊಮ್ಮಿಸುವ ಕೊಳಲು ವಾದನ ಕಲೆ ಮೂಲೆ ಗುಂಪಾಗುತ್ತಿರುವುದು ಶೋಚನೀಯ ಇನ್ನಾದರೂ ಕೊಳಲು ವಿದ್ಯೆಯನ್ನು ನಮ್ಮ ಮಕ್ಕಳಿಗೆ ಕಲಿಸುವುದರ ಮೂಲಕ ಒಂದು ಸನಾತನ ಕಲೆಗೆ ಜೀವ ತುಂಬೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿರುವ ಶಿಕ್ಷಕಿಯರಾದ ಶ್ತೀಮತಿ ನಾಗಲತಾ, ನಿರ್ಮಲಾ, ರೇಣುಕಾ, ಅಂಬುಜಾಕ್ಷಿ, ಸವಿತಾ, ಇನ್ನಿತರರು ಉಪಸ್ಥಿತರಿದ್ದರು.