ನವದೆಹಲಿ: ದೇಶದ ಜನರ ಸಮಸ್ಯೆಗಳ ಪರ ಸಂಸತ್ತಿನಲ್ಲಿ ಧ್ವನಿ ಎತ್ತುವುದು ನನ್ನ ಕರ್ತವ್ಯವಾಗಿದೆ. ಜನರಿಗೆ ಅವರ ಹಕ್ಕುಗಳು ಮತ್ತು ನ್ಯಾಯ ಸಿಗುವವರೆಗೆ ನಾನು ಇದನ್ನು ನಿಲ್ಲಿಸುವುದಿಲ್ಲ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ವಾಟ್ಸ್‌ಆ್ಯಪ್ ನ ತಮ್ಮ ಚಾನಲ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಅವರು, ‘ನನಗೆ, ವಿರೋಧ ಪಕ್ಷದ ನಾಯಕ ಎಂಬುದು ಕೇವಲ ಹುದ್ದೆಯಲ್ಲ. ದೇಶದ ಜನರ ಸಮಸ್ಯೆಗಳನ್ನು ಅರಿತು, ಅವುಗಳ ಪರ ಸಂಸತ್ತಿನಲ್ಲಿ ಧ್ವನಿ ಎತ್ತುವುದು ನನ್ನ ಕರ್ತವ್ಯವಾಗಿದೆ. ದೇಶದ ಜನರಿಗೆ ಅವರ ಹಕ್ಕುಗಳು ಮತ್ತು ನ್ಯಾಯ ಸಿಗುವವರೆಗೆ ನಾನು ಇದನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದ್ದಾರೆ.
ಇದರೊಂದಿಗೆ ರಾಹುಲ್ ಗಾಂಧಿ ಅವರು ವಿವಿಧ ಸಂಘಗಳೊಂದಿಗೆ ಸಭೆ ನಡೆಸಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋವು ರಾಹುಲ್ ಗಾಂಧಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಡಿಯೋ ತುಣುಕು, ಹಾಥರಸ್ ಕಾಲ್ತುಳಿತದ ಸಂತ್ರಸ್ತರೊಂದಿಗಿನ ಸಭೆ, ಭಾರತೀಯ ರೈಲ್ವೆ ಲೋಕೊ ಪೈಲಟ್‌ಗಳೊಂದಿಗಿನ ಸಭೆ, ಸಂರ್ಘಷ ಪೀಡಿತ ಮಣಿಪುರದ ಸಂತ್ರಸ್ತರನ್ನ ಭೇಟಿ ಮಾಡಿರುವುದನ್ನು ಒಳಗೊಂಡಿದೆ.