ಯುದ್ಧೋನ್ಮಾದದಲ್ಲಿರುವ ರಷ್ಯಾದಲ್ಲಿ ಜನಸಂಖ್ಯೆ ಕುಸಿಯುತ್ತಿದೆ, ಹೀಗಾಗಿ ಜನಸಂಖ್ಯೆ ಹೆಚ್ಚಳಕ್ಕೆ ಕಸರತ್ತು ನಡೆಸುತ್ತಿದೆ. ಜನಸಂಖ್ಯೆಯ ತೀವ್ರ ಇಳಿಕೆ ರಷ್ಯಾವನ್ನು ಬಾಧಿಸುತ್ತಿದೆ.
ಜನಸಂಖ್ಯೆ ಹೆಚ್ಚಿದ್ರೂ ಕಷ್ಟ, ಕಡಿಮೆಯಾದರೂ ಕಷ್ಟ. ಭಾರತದಂತ ಹಲವು ರಾಷ್ಟ್ರಗಳು ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ.
ಲೈಂಗಿಕತೆ ಬಗ್ಗೆ ಅರಿಯಲು ಈಗಾಗಲೇ ಜಗತ್ತಿನ ಹಲವೆಡೆ ಸೆಕ್ಸ್ ಕಾಲೇಜುಗಳು, ಕೋರ್ಸ್ಗಳು ಲಭ್ಯ ಇವೆ. ಸದ್ಯ ರಷ್ಯಾ ತನ್ನ ದೇಶದಲ್ಲಿ ಸೆಕ್ಸ್ ಯೂನಿವರ್ಸಿಟಿ ತೆರೆಯಲು ಮುಂದಾಗಿದೆ.
ಕಾರಣ ಏನು ಅಂದ್ರೆ ಆಧುನಿಕ ಜೀವನಶೈಲಿ ಹಾಗೂ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಹೀಗಾಗಿ ಜನಸಂಖ್ಯೆ ಇಳಿಕೆಯ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಗ್ಲಾವ್‌ಪಿಆರ್ ಎಂಬ ಏಜೆನ್ಸಿ ‘ಸೆಕ್ಸ್ ಸಚಿವಾಲಯ’ ಸ್ಥಾಪಿಸುವಂತೆ ಪುಟಿನ್ ಸರ್ಕಾರಕ್ಕೆ ಸಲಹೆ ನೀಡಿದೆ.
ಇನ್ನು ರಷ್ಯಾದಲ್ಲಿ ಜನಸಂಖ್ಯೆ ಹೆಚ್ಚಿಸಲು ಪುಟಿನ್ ಸರ್ಕಾರ ವಿವಿಧ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಅಂತ ಈಗಾಗಲೇ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.
ರಾತ್ರಿ ವೇಳೆ ಕರೆಂಟ್, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸುವುದು ಅಂದ್ರೆ ರಾತ್ರಿ 10ರಿಂದ ರಾತ್ರಿ 2 ಗಂಟೆಯವರೆಗೆ ವಿದ್ಯುತ್, ಇಂಟರ್ನೆಟ್ ಸ್ಥಗಿತ ಮಾಡುವುದು. ಈ ಹೊತ್ತಲ್ಲಿ ಜನರ ಲೈಂಗಿಕ ಕ್ರಿಯೆಗೆ ಪ್ರೋತ್ಸಾಹ ನೀಡುವುದು. ಇನ್ನು ಹೆಂಗಸರು ಮನೆಯಲ್ಲೇ ಇರಲು ಸರ್ಕಾರದಿಂದ ಸಂಬಳ ನೀಡುವುದು. ಈ ಮೂಲಕ ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಇನ್ನು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ ಈಗಾಗಲೇ ರಷ್ಯಾ ಸರ್ಕಾರ ಮಹಿಳೆಯರ ಮೇಲೆ ಒತ್ತಡ ಹೇರಲಾರಂಭಿಸಿದೆ. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಂದ ಅವರ ಖಾಸಗಿ ಲೈಂಗಿಕ ಜೀವನದ ಕುರಿತು ಬಲವಂತವಾಗಿ ಮಾಹಿತಿ ಕಲೆ ಹಾಕಲಾಗ್ತಿದೆ. ಅವರಿಗೆ ಸರ್ಕಾರದಿಂದ ಪ್ರಶ್ನಾವಳಿ ನೀಡಲಾಗುತ್ತಿದ್ದು, ನೀವು ಯಾವಾಗ ಲೈಂಗಿಕ ಕ್ರಿಯೆ ಆರಂಭಿಸಿದಿರಿ, ಕಾಡೋಂ ಬಳಸುತ್ತೀರಾ, ಸಂತಾನಹೀನತೆ ಸಮಸ್ಯೆ ಇದೆಯೇ ಎಷ್ಟು ಮಕ್ಕಳನ್ನು ಹಡೆಯುವ ಪ್ಲಾನ್ ಇದೆ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗ್ತಿದೆ.
ಸರ್ಕಾರದಿಂದಲೇ ಉಚಿತವಾಗಿ ಬಂಜೆತನ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗ್ತಿದೆ. ಒಟ್ಟಾರೆ ರಷ್ಯಾ ಸರ್ಕಾರ ಕೈಗೊಂಡಿರುವ ಈ ಕ್ರಮಗಳಿಂದ ಫಲವಂತಿಕೆ ಹೆಚ್ಚುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.