ಕರ್ನೂಲು:ಕರ್ನೂಲು ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿಯ ರೈತ ಬೋಯ ರಾಮಾಂಜನೇಯುಲು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಜ್ರ ಸಿಕ್ಕಿದೆ. ಇದರಿಂದ ರೈತ ರಾತ್ರೋರಾತ್ರಿ ಶ್ರೀಮಂತನಾಗಿದ್ದಾನೆ.
ಜೊನ್ನಗಿರಿಯ ರಾಮಾಂಜನೇಯುಲು ಮತ್ತು ಅವರ ಸಹೋದರ ಶೇಖರ್, ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿರುವವರು. ಸಾಗುವಳಿ ಇಲ್ಲದಿದ್ದಾಗ ವಾಹನ ಚಾಲಕರಾಗಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಬೋಯ ರಾಮಾಂಜನೇಯಲು ಎಂಬುವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಕ್ಕಿದ ವಜ್ರವನ್ನು ಜೊನ್ನಗಿರಿಯ ವಜ್ರದ ವ್ಯಾಪಾರಿಗೆ ತೋರಿಸಿದ್ದು, ವ್ಯಾಪಾರಿ 12 ಲಕ್ಷ ರೂ.ನಗದು ಹಾಗೂ ಐದು ತೊಲ ಚಿನ್ನ ನೀಡಿದ್ದಾನೆ ಎನ್ನಲಾಗಿದೆ.
ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ರೈತನಿಗೆ ದಿಢೀರ್ ನಗ-ನಗದು ಹಾಗೂ ಬಂಗಾರದ ಹರಿವು ಅಪಾರ ಸಂತಸ ತಂದಿದೆ. ಆದರೆ, ಈ ಘಟನೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಖಾರಿಫ್ ಹಂಗಾಮಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ವರ್ಷ ಇಲ್ಲಿಯವರೆಗೆ 42 ವಜ್ರಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಪ್ರತಿ ವಾರ 4–8 ವಜ್ರಗಳು ಪತ್ತೆಯಾಗುತ್ತಿವೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಅವು ಎಲ್ಲಿ ಪತ್ತೆಯಾಗಿವೆ ಮತ್ತು ಯಾರಿಗೆ ಮಾರಾಟವಾಗಿವೆ ಎಂಬುದು ನಿಗೂಢವಾಗಿಯೇ ಉಳಿದಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.