ಶ್ರೀನಗರ್ : ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳ ವಾಹನಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಉಗ್ರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ಕೈಗೊಂಡಿವೆ ಎಂದು ಮಾಧ್ಯಮಗಳಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮಾಧ್ಯಮಗಳಿಗೆ ದೊರೆತ ವರದಿ ಪ್ರಕಾರ ಅಖ್ನೂರ್ ನಗರದ ಜೋಗವಾನ್ ಎಂಬಲ್ಲಿ ಉಗ್ರಗಾಮಿಗಳು ಸೈನಿಕರ ವಾಹನಗಳ ಮೇಲೆ ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದ. ಮತ್ತೊಂದು ವರದಿ ಪ್ರಕಾರ ಅಖ್ನೂರ್ ಸೆಕ್ಟರ್‌ನ ಬಟ್ಟಲ್ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಪಡೆಗಳ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದೇ ಉಗ್ರರ ಗುಂಪಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಮೂರರಿಂದ ನಾಲ್ಕು ಉಗ್ರಗಾಮಿಗಳು 15ರಿಂದ 20 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಬಟ್ಟಲ್ ಎಂಬಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ಗುಂಪೊಂದರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.