ಜಾಂಬೂ ಬಹುತೇಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಈ ಹಣ್ಣಿನಲ್ಲಿದೆ. ಇದು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ, ಲಿವರ್ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು.
ಜಾಂಬೂ, ವಾಟರ್ ಆ್ಯಪಲ್, ರೋಸ್ ಆ್ಯಪಲ್ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಈ ಹಣ್ಣಿನ ಪರಿಚಯ ನಿಮಗಿದೆಯೇ? ಕೊಡಗು, ದಕ್ಷಿಣ ಕನ್ನಡ, ಮಲ್ನಾಡು, ಚಿಕ್ಕಮಗಳೂರು ಹೀಗೆ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ ಈ ಹಣ್ಣು ಕಾಣಸಿಗುವುದು.
ಕನ್ನಡದಲ್ಲಿ ಜಾಂಬೂ, ಮಲಯಾಳಂನಲ್ಲಿ ಚಾಂಬಕಾ, ತಮಿಳಿನಲ್ಲಿ ಪನ್ನೀರ್ ನಾವಲ್ ಅಥವಾ ಜಾಂಬೂ ಹೀಗೆ ಅನೇಕ ಹೆಸರಿನಿಂದ ಕರೆಯಲ್ಪಡುವ ಈ ಹಣ್ಣು ಅನೇಕ ಕಾಯಿಲೆಗಳನ್ನು ಗುಣ ಪಡಿಸಲು ಬಳಸಲಾಗುವುದು.
ಇದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬಂದರೆ ಕೆಲವೊಂದು ಮರಗಳಲ್ಲಿ ಮಳೆಗಾಲದಲ್ಲಿ, ಚಳಿಗಾಲದಲ್ಲೂ ಕಂಡು ಬರುವುದು. ಆದ್ದರಿಂದ ಇದನ್ನು ಇದೇ ಕಾಲದಲ್ಲಿ ಬೆಳೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ, ಬಹುತೇಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಈ ಹಣ್ಣಿನಲ್ಲಿದೆ ಗೊತ್ತಾ? ಇದು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ, ಲಿವರ್ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು. ಇದನ್ನು ಭಾರತದ ಸಾಂಪ್ರದಾಯಿಕ ಔಷಧಗಳಾದ ಯುರ್ವೇದ, ಸಿದ್ಧ ಮತ್ತು ಯುನಾನಿಯಲ್ಲಿ ಕೂಡ ಬಳಸಲಾಗುವುದು. ಈ ಹಣ್ಣಿಗೆ ಮಾವಿನ ಹಣ್ಣಿನಂತೆ ತುಂಬಾ ಪರಿಮಳವೇನೂ ಇರಲ್ಲ, ಅಲ್ಲದೆ ತಿನ್ನುವಾಗ ಹುಳಿ ಮಿಶ್ರಿತ ಸಿಹಿ ಇರುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು, ಕೊಲೆಸ್ಟ್ರಾಲ್ ಇರಲ್ಲ, ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ, ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು.
ವಾಟರ್ ಆ್ಯಪಲ್‌ನಲ್ಲಿರುವ ಪೋಷಕಾಂಶಗಳೆಂದರೆ
100 ಗ್ರಾಂ ಹಣ್ಣಿನಲ್ಲಿ ಶೇ. 90-93ರಷ್ಟು ನೀರಿನಂಶವಿರುತ್ತದೆ ಪ್ರೊಟೀನ್ 0.6ಗ್ರಾಂ ಕಾರ್ಬ್ಸ್ 5.7 ಗ್ರಾಂ ಪಿಷ್ಠ, ಸಕ್ಕರೆಯಂಶ:0 ಕೊಬ್ಬು ಶೇ. 0.3 ವಿಟಮಿನ್ ಸಿ 156ಮಿಗ್ರಾಂ ವಿಟಮಿನ್ ಎ 22 ಮಿಗ್ರಾಂ ವಿಟಮಿನ್ ಬಿ1 10 ಮಿಗ್ರಾಂ ವಿಟಮಿನ್ ಬಿ3 5 ಮಿಗ್ರಾಂ ಖನಿಜಾಂಶಗಳು ಕ್ಯಾಲ್ಸಿಯಂ 29 ಮಿಗ್ರಾಂ ಕಬ್ಬುಣದಂಶ 0.1 ಮಿಗ್ರಾಂ ಮೆಗ್ನಿಷ್ಯಿಯಂ 5.0ಮಿಗ್ರಾಂ ರಂಜಕ 8 ಮಿಗ್ರಾಂ ಪೊಟಾಷ್ಯಿಯಂ 123 ಮಿಗ್ರಾಂ ಗಂಧಕ 13 ಮಿಗ್ರಾಂ
ಆರೋಗ್ಯಕರ ಗುಣಗಳು
ದೇಹದಲ್ಲಿರುವ ಬೇಡದ ಅಂಶ ಹೊರ ಹಾಕಿ ದೇಹ ಶುದ್ಧ ಮಾಡುತ್ತೆ ಇದರಲ್ಲಿ ವಿಟಮಿನ್ ಸಿ ಇದ್ದು ಇದು ಬೇಡದ ರಾಸಾಯನಿಕಗಳಿಂದ ಜೀವ ಕಣಗಳಿಗೆ ಹಾನಿಯುಂಟಾಗುವುದನ್ನು ತಡೆಯುತ್ತದೆ, ಅಲ್ಲದೆ ದೇಹದಲ್ಲಿ ಬೇಡದಿರುವ ರಾಸಾಯನಿಕಗಳನ್ನು ಹೊರ ಹಾಕುವಲ್ಲಿ ಕೂಡ ಸಹಕಾರಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ಇದು ಬಿಳಿ ರಕ್ತಕಣಗಳು ಹೆಚ್ಚಲು ಸಹಕಾರಿ. ಇದರಲ್ಲಿರುವ ವಿಟಮಿನ್ ಸಿ ಆ್ಯಂಟಿಆಕ್ಸಿಡೆಂಟ್ ಆಗಿ ವರ್ತಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.
ಸ್ಟ್ರೋಕ್ ತಡೆಗಟ್ಟುತ್ತೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು
ಇದರಲ್ಲಿರುವ ಸೋಡಿಯಂ ಹಾಗೂ ಕೊಲೆಸ್ಟ್ರಾಲ್ ಅಂಶ ಇಲ್ಲದೇ ಇರುವುದರಿಂದ ಸ್ಟ್ರೋಕ್ ಅಪಾಯ ತಗ್ಗಿಸುತ್ತೆ. ಉರಿಯೂತ ಕಡಿಮೆ ಮಾಡುವುದು, ಹೃದಯದ ಆರೋಗ್ಯ ವೃದ್ಧಿಸುವುದು. ಅಲ್ಲದೆ ಇದು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವುದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು.