ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಬಾರದು. ಯಾರಾದರೂ ಹಣ ಕೇಳಿದಲ್ಲಿ ಕೂಡಲೇ ಜಿಲ್ಲಾ ಶಸ್ತ್ರಚಿಕಿತ್ಸಕರ ಗಮನಕ್ಕೆ ತರಬೇಕು. ರೋಗಿಗಳು ಯಾರಿಗೂ ಹಣ ನೀಡಿ ಪ್ರೋತ್ಸಾಹಿಸಬಾರದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮನವಿ ಮಾಡಿದ್ದಾರೆ.
ರೋಗಿಗಳು ಆಸ್ಪತ್ರೆಗೆ ಬರುವಾಗ ತಪ್ಪದೇ ಆಧಾರ ಕಾರ್ಡ್ ಮತ್ತು ಪಡಿತರ ಚೀಟಿ ತೆಗೆದುಕೊಂಡು ಬರಬೇಕು. ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾದಾಗ ರೋಗಿಯವರನ್ನು ನೋಡಲು ನಿಗಧಿತ ಸಮಯದಲ್ಲಿ ಮಾತ್ರ ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ನೀಡಬೇಕು. ರೋಗಿಯ ಜೊತೆಯಲ್ಲಿ ಒಬ್ಬರು ಅಥವಾ ಇಬ್ಬರು ಅಟೆಂಡರ್ಸ್ ಮಾತ್ರ ಇರುವುದು.
ರೋಗಿಗಳು ಇತ್ತೀಚಿನ ದಿನಗಳಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ತದಂತರ ಬಂದು ರೆಫರಲ್‍ಗಾಗಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಒತ್ತಡ ಹಾಕುತ್ತಿರುವುದು ಕಂಡುಬಂದಿರುತ್ತದೆ. ಹೀಗಾಗಿ ಇಂತಹ ಕ್ರಮಗಳಿಗೆ ಯಾರೂ ಕೂಡ ಮುಂದಾಗದೆ, ಮೊದಲು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಚಿಕಿತ್ಸೆಯು ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದಾಗ ಮಾತ್ರ ಎಬಿ-ಎಆರ್‍ಕೆ ಯೋಜನೆಯಡಿಯಲ್ಲಿ ಬೇರೆ ಆಸ್ಪತ್ರೆಗೆ ರೆಫರಲ್ ಮಾಡಿಕೊಡಲಾಗುವುದು. ಎಬಿ-ಎಆರ್‍ಕೆ ಅಡಿಯಲ್ಲಿ ದಾಖಲಾದ ಎಲ್ಲಾ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು. ಯಾವುದೇ ದೂರುಗಳು ಇದ್ದಲ್ಲಿ ತಕ್ಷಣವೇ ಜಿಲ್ಲಾ ಶಸ್ತ್ರಚಿಕಿತ್ಸಕರ ಗಮನಕ್ಕೆ ತರಬೇಕು ಎಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.