ದಿಲ್ಲಿಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದೆ. ವಿಶ್ವದ ದಿಗ್ಗಜ ನಾಯಕರು ಒಂದೆಡೆ ಸೇರಿ ಸಮಾಲೋಚನೆ ನಡೆಸುತ್ತಿದ್ದಾರೆ. ಈ ಮಧ್ಯೆ ಜಿ-20 ಶೃಂಗಸಭೆಯ ನೆಪದಲ್ಲಿ ರಾಜಕೀಯ ಮಾಡಲು ಹೋಗಿ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.
ಕಾಂಗ್ರೆಸ್ ಗೆ ಮುಖಭಂಗವಾಗಿದ್ದು ಹೇಗೆ?
ಜಿ-20 ನಾಯಕರಿಗೆ ಆಯೋಜಿಸಿರುವ ಔತಣಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡದೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜಕೀಯ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಆಹ್ವಾನಿಸಿರುವ ಜಿ-20 ಶೃಂಗಸಭೆಯ ಔತಣಕೂಟಕ್ಕೆ ಯಾವ ರಾಜಕೀಯ ಮುಖಂಡರಿಗೂ ಆಹ್ವಾನ ನೀಡಿಲ್ಲ ಎಂದು ತಿಳಿದು ಬಂದಿದೆ.
ಖರ್ಗೆ ಮಾತ್ರವಲ್ಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಆಹ್ವಾನ ನೀಡಿಲ್ಲ ಎನ್ನುವ ವಿಚಾರ ಬಹಿರಂಗಗೊಂಡು ಕಾಂಗ್ರೆಸ್ ಗೆ ಮುಖಭಂಗವಾಗಿದೆ.
ಖರ್ಗೆ ಅವರಿಗೆ ಆಹ್ವಾನ ನೀಡದೆ ಬಿಜೆಪಿ ದಲಿತರನ್ನು ದಮನ ಮಾಡುತ್ತಿದೆ. ಖರ್ಗೆ ದಲಿತ ನಾಯಕರಾಗಿರುವುದರಿಂದ ಕೇಂದ್ರ ಹೀಗೆ ಮಾಡುತ್ತಿದೆ ಎಂದೆಲ್ಲ ಬಿಂಬಿಸಲು ರಾಹುಲ್ ಗಾಂಧಿ ಸಹಿತ ಅನೇಕ ಕಾಂಗ್ರೆಸ್ ಮುಖಂಡರು ಯತ್ನಿಸಿದ್ದರು. ಆದರೆ ಇದೀಗ ನಡ್ಡಾ ಅವರಿಗೂ ಆಹ್ವಾನ ನೀಡಲಾಗಿಲ್ಲ ಎನ್ನುವ ವಿಚಾರ ತಿಳಿದ ಬಳಿಕ ಕೈ ಪಡೆ ಮೌನಕ್ಕೆ ಶರಣಾಗಿದೆ.
ಕೇಂದ್ರದಲ್ಲಿರುವುದು ಮೋದಿ ನೇತೃತ್ವದ ಸರಕಾರವೋ ಮನು ನೇತೃತ್ವದ ಸರಕಾರವೋ ಎಂದು ತಮಿಳುನಾಡು ಕಾಂಗ್ರೆಸ್ ನಾಯಕ ಮೋಹನ್ ಕುಮಾರಮಂಗಲಂ ಪ್ರಶ್ನಿಸಿದ್ದರು. ಆದರೆ ಕೆಲವು ಮಾನದಂಡಗಳನ್ನಿಟ್ಟುಕೊಂಡು ಔತಣಕೂಟಕ್ಕೆ ಆಹ್ವಾನಿಸಲಾಗಿದೆ ಎನ್ನುವ ವಿಚಾರ ಬಹಿರಂಗಗೊಂಡಿದೆ. ಸದ್ಯ ಬಿಜೆಪಿ ಕಾಂಗ್ರೆಸ್ ಎದುರಿಸಲು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.