ಸೆಪ್ಟಂಬರ್ 9 ಮತ್ತು 10ರಂದು ದಿಲ್ಲಿಯ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರದಲ್ಲಿ ಮಹತ್ವದ ಜಿ-20 ನಾಯಕರ ಸಭೆ ನಡೆಯಲಿದ್ದು, ಜಗತ್ತಿನ ಕಣ್ಣು ಇತ್ತ ನೆಟ್ಟಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜಿ-20 ಕಾರ್ಯಕ್ರಮದ ಎರಡು ದಿನ ಮೊದಲೇ ಭಾರತಕ್ಕೆ ಆಗಮಿಸಲಿದ್ದಾರೆ.
ಸೆ. 7ರಂದು ಆಗಮನ
ಸೆ. 7ರಂದು ಭಾರತಕ್ಕೆ ಆಗಮಿಸಲಿರುವ ಬೈಡನ್ ಸೆ. 8ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಈ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಭಾರತ ಪ್ರವಾಸವನ್ನು ಎದುರು ನೋಡುತ್ತಿರುವುದಾಗಿ ಹೇಳಿರುವ ಬೈಡನ್ ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಗೈರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತಿತರರು ಈ ಸಭೆಯಲ್ಲಿ ಭಾಗವಹಿಸುತ್ತಿರುವುದು ಖಚಿತವಾಗಿದೆ.
ಚೀನಾ ಮತ್ತು ಭಾರತ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಸಂದರ್ಭದಲ್ಲಿಯೇ ಷಿ ಜಿಂಗ್ ಪಿಂಗ್ ಪಾಲ್ಗೊಳ್ಳದಿರುವುದು ಅನುಮಾನ ಮೂಡಿಸಿದೆ. ಅವರ ಬದಲು ಪ್ರಧಾನಿ ಲಿ ಕಿಯಾಂಗ್ ಸಭೆಗೆ ಆಗಮಿಸಲಿದ್ದಾರೆ.
ಚಿ ಜಿಂಗ್ ಪಿಂಗ್ ಗೈರಾಗುತ್ತಿರುವುದಕ್ಕೆ ಕಾರಣ ಬಹಿರಂಗವಾಗಿಲ್ಲ. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ಮತ್ತು ಪೂರ್ವ ಏಷ್ಯಾ ಶೈಂಗಕ್ಕೂ ಸಿ ಜಿಂಗ್ ಪಿಂಗ್ ಗೈರಾಗಿದ್ದರು.