ಧಾರವಾಡ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದ ಗಲಾಟೆಗೆ ಸಂಬಂಧಪಟ್ಟಂತೆ ಅಪರಾಧಿಗಳಿಗೆ ಕೊಪ್ಪಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಧಾರವಾಡದ ಹೈಕೋರ್ಟ್ ವಿಭಾಗೀಯ ಪೀಠ ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಆದರೆ ಇದೀಗ 99 ಜನ ಅಪರಾಧಿಗಳ ಪೈಕಿ 98 ಮಂದಿಗೆ ಧಾರವಾಡದ ಹೈಕೋರ್ಟ್ ಜಾಮೀನು ನೀಡಿದೆ.
ಕೊಪ್ಪಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ 98 ಮಂದಿ ಅಪರಾಧಿಗಳು ಅ.28 ರಂದು ಧಾರವಾಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಇಬ್ಬರು ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠವು 98 ಮಂದಿ ಅಪರಾಧಿಗಳಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾತನಾಡಿದ ವಕೀಲರು, ಕೊಪ್ಪಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಧಾರವಾಡ ಹೈಕೋರ್ಟ್, ಪ್ರಕರಣದ ಎ1 ಆರೋಪಿ ಮಂಜುನಾಥ ಎಂಬುವವರನ್ನು ಹೊರತುಪಡಿಸಿ, ಉಳಿದ ಎಲ್ಲ ಅಪರಾಧಿಗಳಿಗೆ ಜಾಮೀನು ನೀಡಿದೆ. ಮಂಜುನಾಥ ಜಾಮೀನಿಗೆ ಅರ್ಜಿ ಹಾಕದೇ ಇದ್ದಿದ್ದರಿಂದ ಆತನಿಗೆ ಜಾಮೀನು ದೊರೆತಿಲ್ಲ ಎಂದು ತಿಳಿಸಿದರು.