ದೆಹಲಿ: ಹದಿನೆಂಟನೇ ಲೋಕಸಭೆಯ ಚೊಚ್ಚಲ ಅಧಿವೇಶನ ಇದೇ ತಿಂಗಳ 24 ರಿಂದ ಆರಂಭವಾಗಲಿದ್ದು, ಜೂನ್ 26 ರಂದು ಲೋಕಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಂಸತ್ ಸಚಿವಾಲಯದ ಮೂಲಗಳು ತಿಳಿಸಿವೆ. ಜೂನ್ 24, 25 ರಂದು ನೂತನವಾಗಿ ಆಯ್ಕೆಗೊಂಡ ಸಂಸತ್ ನ ಎಲ್ಲ ಸದಸ್ಯರಿಗೂ ಪ್ರಮಾಣ ವಚನ ಬೋಧಿಸಲಾಗುವುದು. ಈ ಕಾರ್ಯವನ್ನು ನಡೆಸಿಕೊಡಲೆಂದು ರಾಷ್ಟ್ರಪತಿಯವರು ಹಂಗಾಮಿ ಸ್ಪೀಕರ್ ಅವರನ್ನು ನೇಮಿಸುವರು. ಬಳಿಕ ಜೂನ್. 26 ರಂದು ಸಂಸತ್ ನ ಎಲ್ಲ ಸದಸ್ಯರು ಸ್ಪೀಕರ್ ಹುದ್ದೆಯ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಓರ್ವ ಅಭ್ಯರ್ಥಿಗೆ ಲಿಖಿತ ರೂಪದಲ್ಲಿ ತಮ್ಮ ಬೆಂಬಲ ಪತ್ರವನ್ನು ನೀಡಬೇಕಾಗುತ್ತೆ. ಪ್ರತಿ ಸಲ ಸ್ಪೀಕರ್ ಆಯ್ಕೆಯ ದಿನದಂದೇ ಸಂಸತ್ ಸದಸ್ಯರು ಸ್ಪೀಕರ್ ಆಯ್ಕೆಗೆ ಬೆಂಬಲ ಪತ್ರಗಳನ್ನು ನೀಡುತ್ತಿದ್ದರೆ, ಇದೇ ಮೊದಲ ಬಾರಿಗೆಂಬಂತೆ ಒಂದು ದಿನ ಮುನ್ನವೇ ಅಂದರೆ ಜೂನ್ 25 ರಂದೇ ಸ್ಪೀಕರ್ ಆಯ್ಕೆಯ ಬೆಂಬಲ ಪತ್ರವನ್ನು ಸೆಕ್ರೆಟರಿಯಟ್ ಗೆ ಸಲ್ಲಿಸಬೇಕಿದೆ. 26 ರಂದು ಸ್ಪೀಕರ್ ಚುನಾವಣೆಯಲ್ಲಿ ಮತಗಳನ್ನು ಎಣಿಸಲಾಗುತ್ತೆ. ಅಧಿಕ ಮತಗಳನ್ನು ಪಡೆದ ಅಭ್ಯರ್ಥಿ ಬಳಿಕ ಸ್ಪೀಕರ್ ಆಗಿ ಆಯ್ಕೆಗೊಳ್ಳುತ್ತಾರೆ. ಇದಾದ ಮಾರನೇ ದಿನ ಜೂನ್. 27 ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು. ಜುಲೈ 3ರ ವರೆಗೆ ಸಂಸತ್ ನ ವಿಶೇಷ ಅಧಿವೇಶನ ಮುಂದುವರಿಯುವುದು. ಯಾರಾಗಲಿದ್ದಾರೆ ಈ ಬಾರಿ ಸ್ಪೀಕರ್? 18ನೇ ಲೋಕಸಭೆಗೆ ಆಯ್ಕೆಯಾದ ಸದಸ್ಯರಲ್ಲಿ ಈ ಬಾರಿ ಸ್ಪೀಕರ್ ಯಾರಾಗಲಿದ್ದಾರೆ? ಅನ್ನೋ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲವಾದರೂ ಸದ್ಯ ಮೂರ್ನಾಲ್ಕು ಹೆಸರುಗಳು ಮುನ್ನೆಲೆಗೆ ಬಂದಿವೆ. ಈ ಪೈಕಿ ಕೇಳಿ ಬಂದ ಮೊದಲ ಹೆಸರು ಪುರಂದೇಶ್ವರಿ ಅವರದು. ಆ ಬಳಿಕ ಕೇಳಿ ಬಂದ ಹೆಸರು ಈಗಾಗಲೇ ಸ್ಪೀಕರ್ ಆಗಿದ್ದ ರಾಜಸ್ಥಾನ ಮೂಲದ ಓಂ ಬಿರ್ಲಾ ಅವರ ಹೆಸರು. ಇದಲ್ಲದೇ ಇನ್ನೂ ಒಂದೆರಡು ಸಂಸದರ ಹೆಸರುಗಳು ಪಟ್ಟಿಯಲ್ಲಿವೆಯಾದರೂ ಯಾರ ಹೆಸರೂ ಅಂತಿಮಗೊಂಡಿಲ್ಲ. ಆಯ್ಕೆಗೊಂಡ ಒಟ್ಟು ಸಂಸದರ ಅರ್ಧಕ್ಕಿಂತಲೂ ಹೆಚ್ಚು ಮಂದಿ ತಮ್ಮ ಮತಗಳ ಮೂಲಕ ಆಯ್ಕೆ ಮಾಡುತ್ತಾರೆ. ಹೀಗೆ ಸಂಸದರಿಂದ ಸ್ಪೀಕರ್ ಆಗಿ ಆಯ್ಕೆಯಾದವರು ತಾವು ಸೇರಿದ್ದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ. ಸಂವಿಧಾನದ 94ನೇ ವಿಧಿಯ ಪ್ರಕಾರ, ಲೋಕಸಭೆಯ ಕಸ್ಟೋಡಿಯನ್ ಆಗಿ ಕಾರ್ಯ ನಿರ್ವಹಿಸಬೇಕಾಗುತ್ತೆ. ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುವ ವ್ಯಕ್ತಿಯು ಸಂಸದೀಯ ಕಾರ್ಯವಿಧಾನಗಳನ್ನು ಅರಿತವನಾಗಿರಬೇಕು. ಜೊತೆಗೆ ನಮ್ಮ ಸಂವಿಧಾನದ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಸ್ಪೀಕರ್ ಅವಧಿಯೂ ಐದು ವರ್ಷಗಳ ಕಾಲ ಇರುತ್ತೆ.