ಬೆಂಗಳೂರು : ಇದೇ ನವೆಂಬರ್ 13ರಂದು ರಾಜ್ಯದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಚುನಾವಣಾ ಪ್ರಚಾರ ನಡೆಸಲು ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು 40 ಜನರ ಸ್ಟಾರ್ ಪ್ರಚಾರಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚುನಾವಣಾ ಆಯೋಗಕ್ಕೂ ಪಟ್ಟಿಯನ್ನ ರವಾನೆ ಮಾಡಿದ್ದಾರೆ. ಆದರೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರನ್ನು ಕೈಬಿಡಲಾಗಿದೆ.
ಇತ್ತೀಚೆಗೆ ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆ ನೀಡಬೇಕೆಂಬ ಒತ್ತಾಯದ ವಿಚಾರಕ್ಕೆ ಸಂಬಂಧಿಸಿದಂತೆ ಜಿ.ಟಿ ದೇವೇಗೌಡರು ದಸರಾ ಉದ್ಘಾಟನಾ ವೇದಿಕೆಯಲ್ಲೇ ಕುಮಾರಸ್ವಾಮಿ ವಿರುದ್ಧವೇ ವಾಗ್ದಾಳಿ ನಡೆಸಿದ್ದರು. ಅದಾದ ಬಳಿಕ ಜಿಟಿ ದೇವೇಗೌಡ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಈ ಹಿನ್ನೆಲೆ ಉಪಚುನಾವಣೆಗೆ ಸ್ಟಾರ್ ಪ್ರಚಾರ ಪಟ್ಟಿಯಿಂದ ಜಿ.ಟಿ ದೇವೇಗೌಡ ಅವರಿಗೆ ಕೋಕ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೀಗ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ದೇವೇಗೌಡ, ಕುಮಾರಸ್ವಾಮಿ, ಸುರೇಶ್ ಬಾಬು, ಅನಿತಾ ಕುಮಾರಸ್ವಾಮಿ, ಸಾ.ರಾ. ಮಹೇಶ್, ಪುಟ್ಟರಾಜು, ಹರೀಶ್ ಗೌಡ, ಮಲ್ಲೇಶ್ ಬಾಬುಗೆ ಸ್ಥಾನ ನೀಡಲಾಗಿದೆ.