ಬೆಂಗಳೂರು: ಚಿಕ್ಕೋಡಿಯ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿಯು 500ಕ್ಕೂ ಹೆಚ್ಚು ಪುಟಗಳ ಚಾರ್ಜ್‍ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ.
ಜುಲೈ 5ರಂದು ಜೈನಮುನಿಯನ್ನು ಹಂತಕರು ಕರೆಂಟ್ ಶಾಕ್ ಕೊಟ್ಟು ತುಂಡರಿಸಿ ಬೋರ್ ವೆಲ್‍ಗೆ ಬಿಸಾಡಿದ್ದರು. ಇದೀಗ ಹಣ ಮಾತ್ರವಲ್ಲದೇ ಜೈನಮುನಿ ಬೈಗುಳ ಕೂಡ ಕೊಲೆಗೆ ಕಾರಣ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಆರೋಪಿಗಳು ಸಿಐಡಿ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿ ನಾರಾಯಣ ಮಾಳಿಯು ಜೈನಮುನಿ ಜೊತೆ ಹೆಚ್ಚು ಒಡನಾಟ ಹೊಂದಿದ್ದು 6 ಲಕ್ಷ ಹಣ ಪಡೆದಿದ್ದರು. ಆರೋಪಿಯನ್ನು ಹೀಯಾಳಿಸಿ ನಿಂದನೆ ಜೊತೆ ಬೈದ್ದಿದ್ದರು.
ಜೈನಮುನಿ ಬೈಗುಳದಿಂದ ಆರೋಪಿ ನಾರಾಯಣ ಕೊಲೆಗೆ ಪ್ಲಾನ್ ಹಾಕಿದ್ದ. ಅಂತೆಯೇ ಇತರ ಆರೋಪಿಗಳ ಜೊತೆ ಸೇರಿ ಕೊಲೆ ಮಾಡಿ ಗುರುತು ಪತ್ತೆಯಾಗದಂತೆ ದೇಹ ಕತ್ತರಿಸಿದ. ಬಳಿಕ ಕೊಲೆಗೆ ಬಳಸಿದ್ದ ಮಚ್ಚನ್ನು ಮೇಲ್ಸೇತುವೆ ಮೇಲೆ ಬಿಸಾಡಿದ್ದರು.
ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸದ್ಯ 10 ಮಂದಿಯ ಸಾಕ್ಷ್ಯಾಧಾರ, 164 ಹೇಳಿಕೆಗಳ ಜೊತೆ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಿ 500ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.