ದೆಹಲಿ : ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ‘ಅಬಕಾರಿ ನೀತಿ’ ಜಾರಿ ವೇಳೆ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಆಮ್ ಅದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್, ಅಬಕಾರಿ ನೀತಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದರಿಂದ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ನ್ಯಾಯಾಲಯವು ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿತ್ತು. ಇದರ ಬೆನ್ನಲ್ಲೇ, ಅವರ ನಿವಾಸಕ್ಕೆ ಭೇಟಿ ನೀಡಿದ ಇ.ಡಿ. ತಂಡ, ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು. ಆದಾಗ್ಯೂ, ಕೇಜ್ರಿವಾಲ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ ಎಂದು ಎಎಪಿ ಹೇಳಿಕೆ ನೀಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಜೈಲಿನಿಂದ ಓಡುವ ಗ್ಯಾಂಗ್‌ಗಳು ಸರ್ಕಾರವಲ್ಲ, ಜೈಲು ಕೈಪಿಡಿಯ ಪ್ರಕಾರ, ಕೈದಿಗಳಿಗೆ ಸಭೆಗಳಿಗೆ ಹಾಜರಾಗಲು, ಫೋನ್ ಕರೆ ಮಾಡಲು ಅಥವಾ ನಿಯಮ 1349 ರ ಪ್ರಕಾರ ದಾಖಲೆಗಳಿಗೆ ಸಹಿ ಮಾಡಲು ಯಾವುದೇ ಹಕ್ಕಿಲ್ಲ ಹೇಳಿದೆ. ಹೀಗಾಗಿ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಪದಚ್ಯುತಗೊಳಿಸಲು ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.