ಉತ್ತರ ಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಕಾಲೇಜೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ವೇದಿಕೆಯಲ್ಲಿ ನಿಂತು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಿದ್ದಾಗ, ಉಪನ್ಯಾಸಕಿಯೊಬ್ಬರು ಆತನನ್ನು ಗದರಿ ವೇದಿಕೆಯಿಂದ ಇಳಿದು ಹೋಗುವಂತೆ ಸೂಚಿಸಿದ್ದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ ಈಗ ಉಪನ್ಯಾಸಕಿಯನ್ನು ಅಮಾನತುಗೊಳಿಸಿದೆ. ಈ ಕ್ರಮ ತೆಗೆದುಕೊಂಡಿರುವುದಕ್ಕೆ ಕಾಲೇಜು ಆಡಳಿತ ಕಾರಣವನ್ನೂ ವಿವರಿಸಿದೆ.
ಗಾಜಿಯಾಬಾದ್‌ನ ಎಬಿಇಎಸ್ ಕಾಲೇಜಿನ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ಅವರು ವಿಡಿಯೋ ಬಿಡುಗಡೆ ಮಾಡಿದ್ದು, ‘ನಿನ್ನೆ ಒಂದು ವಿಡಿಯೋ ನನ್ನ ಗಮನಕ್ಕೆ ಬಂದಿದೆ. ಆ ವಿಡಿಯೋ ಹೊರಬಿದ್ದ ನಂತರ ನಾವು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ್ದೇವೆ. ಕಾಲೇಜು ಆಡಳಿತ ಮಂಡಳಿ ವತಿಯಿಂದ 24 ಗಂಟೆಯೊಳಗೆ ಶಿಫಾರಸು ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಇಬ್ಬರು ಉಪನ್ಯಾಸಕರ ನಡವಳಿಕೆಯು ಸೂಕ್ತವಲ್ಲದ ಕಾರಣ ಎಂದು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ಗಾಜಿಯಾಬಾದ್‌ನ ಎಬಿಇಎಸ್ ಕಾಲೇಜಿನದ್ದು. ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬರು ವೇದಿಕೆಯಲ್ಲಿ ನಿಂತು ಜೈ ಶ್ರೀರಾಮ್ ಘೋಷಣೆ ಕೂಗಿದರು. ವಿದ್ಯಾರ್ಥಿ ಈ ರೀತಿ ಮಾಡಿದಾಗ, ಉಪನ್ಯಾಸಕಿಯೊಬ್ಬರು ತತ್‌ಕ್ಷಣ ಎದ್ದು ವೇದಿಕೆಯ ಬಳಿ ಹೋಗಿ ಅವರನ್ನು ಹಾಗೆ ಮಾಡದಂತೆ ತಡೆದಿದ್ದಾರೆ. ಇದು ಘೋಷಣೆ ಕೂಗುವ ಸ್ಥಳವಲ್ಲ ಎಂದು ಶಿಕ್ಷಕರು ಹೇಳಿದರು. ಇದಾದ ಬಳಿಕ ‘ಔಟ್’ ಎಂದು ಹೇಳಿ ವಿದ್ಯಾರ್ಥಿಯನ್ನು ವೇದಿಕೆಯಿಂದ ಕೆಳಗಿಳಿಸಿದರು.
ವೇದಿಕೆಯ ಮೇಲೆ ಕೂಗುವುದರಲ್ಲಿ ಯಾವುದೇ ಲಾಜಿಕ್ ಇಲ್ಲ ಎಂದು ಶಿಕ್ಷಕರು ಹೇಳಿದ ಮತ್ತೊಂದು ವೈರಲ್ ವಿಡಿಯೋದಲ್ಲಿ ಕೇಳಿಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಗ್ರಹಿಸಿದ್ದರು. ಗಾಜಿಯಾಬಾದ್ ಪೊಲೀಸ್ ಕಮಿಷನರೇಟ್ ಎಕ್ಸ್‌ನಲ್ಲಿ, “ತನಿಖೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸ್ಟೇಷನ್ ಇನ್‌ಚಾರ್ಜ್ ಕ್ರಾಸಿಂಗ್ ರಿಪಬ್ಲಿಕ್‌ಗೆ ಸೂಚಿಸಲಾಗಿದೆ” ಎಂದು ಬರೆದಿದ್ದಾರೆ. ಇದೀಗ ಕಾಲೇಜು ಆಡಳಿತ ಈ ವಿಚಾರದಲ್ಲಿ ಇಬ್ಬರು ಅಧ್ಯಾಪಕರನ್ನು ಅಮಾನತು ಮಾಡಿದೆ.