ಲಕ್ನೋ: ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಿಂದ ಉತ್ತರ ಪ್ರದೇಶದ ಕಾಶಿಯ ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ಹಿಂದೂ ದೇವಾಲಯವಿತ್ತು ಎಂದು ವರದಿ ನೀಡಿದ ಬೆನ್ನಲ್ಲೇ, ಕನ್ನಡದ ಶಿಲಾಶಾಸನ ಕೂಡ ಪತ್ತೆಯಾಗಿತ್ತು.
ಇದೀಗ ಕನ್ನಡ ಶಾಸನ ಇರುವುದು ಸಾಬೀತಾಗಿದ್ದು, ಅದರ ಚಿತ್ರವನ್ನು ಜ 27 ರಂದು ಬಿಡುಗಡೆಗೊಳಿಸಲಾಗಿದೆ.
ಮಸೀದಿಯಲ್ಲಿ ನಡೆದ ವೈಜ್ಞಾನಿಕ ಸಮೀಕ್ಷೆ ವೇಳೆ ಹಿಂದೂ ದೇವ-ದೇವತೆಗಳ ವಿಗ್ರಹಗಳು, ಹಿಂದೂ ದೇವಾಲಯಕ್ಕೆ ಸಂಬಂದಪಟ್ಟ ಕೆಲವಸ್ತುಗಳು, ಕುರುಹುಗಳು ಪತ್ತೆಯಾಗುವುದರ ಜತೆಗೆ 34 ಶಿಲಾಶಾಸನಗಳು ಕೂಡ ದೊರೆತಿದ್ದವು. ಮಸೀದಿಯಲ್ಲಿ ದೊರೆತ ಶಿಲಾ ಶಾಸನದ ಪೈಕಿ ಕನ್ನಡ, ತೆಲುಗು, ಗ್ರಂಥ, ದೇವನಾಗರಿ ಭಾಷೆಯ ಶಾಸನಗಳೂ ಇವೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾಹಿತಿ ನೀಡಿದ್ದರು.
ಶನಿವಾರ ಬಿಡುಗಡೆಯಾದ ಕನ್ನಡ ಶಾಸನದ ಚಿತ್ರದಲ್ಲಿ ದೊಡರಸಯ್ಯನ ನರಸಂಣನಭಿಂನಹ’ ಎಂದು ಕೆತ್ತಿರುವುದನ್ನು ಕಾಣಬಹುದಾಗಿದೆ. ಕನ್ನಡ ಭಾಷೆಯಲ್ಲಿರುವ ಶಾಸನದ ಫೋಟೋ ಬಹಿರಂಗವಾದ ಬೆನ್ನಲೇ ಈ ಶಾಸನದ ಕುರಿತು ಮತ್ತಷ್ಟು ಸಂಶೋಧನೆ ಆಗಲಿ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.