ವಾರಣಾಸಿ: ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ವಿಚಾರವಾಗಿ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಇಂದು ವರದಿ ಸಲ್ಲಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿಯಲ್ಲಿ ಈ ಹಿಂದೆ ವೈಜ್ಞಾನಿಕ ಮಸೀದಿ ಸಮೀಕ್ಷೆಗೆ ಕೋರ್ಟ್ ಹಲವು ಷರತ್ತು ವಿಧಿಸಿ ಭಾರತೀಯ ಪುರಾತತ್ವ ಇಲಾಖೆಗೆ ಅನುಮತಿ ನೀಡಿತ್ತು. ವೈಜ್ಞಾನಿಕ ಸಮೀಕ್ಷೆಗೆ ಹಿಂದೂಗಳು ಅರ್ಜಿ ಸಲ್ಲಿಸಿದ್ದರು. ಕಳೆದ ಆಗಸ್ಟ್ 5 ರಂದು 17ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ತನ್ನ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ಸಮೀಕ್ಷೆಯ ಸಮಯದಲ್ಲಿ ಯಾವುದೇ ಆಕ್ರಮಣಕಾರಿ ಕೃತ್ಯವನ್ನು ನಡೆಸದಂತೆ ಎಎಸ್‌ಐಗೆ ಸೂಚಿಸಿತ್ತು. ವಾರಣಾಸಿ ನ್ಯಾಯಾಲಯವು ಎಎಸ್‌ಐಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಗಡುವು ನೀಡಿತು. ಅದರ ಮೂಲ ಗಡುವನ್ನು ಸೆಪ್ಟೆಂಬರ್ 4ರವರೆಗೆ ವಿಸ್ತರಿಸಿತ್ತು. ಸಮೀಕ್ಷೆ ನಡೆಸಿದ ನಂತರ ಇಂದು ಪುರಾತತ್ವ ಇಲಾಖೆ ವಾರಾಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.