ನವದೆಹಲಿ: ಭಾರತ್ ಜೋಡೋ ಯಾತ್ರೆಯನ್ನ ಯಶಸ್ವಿಗೊಳಿಸಿದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತ್ತೊಂದು ಯಾತ್ರೆಗೆ ಸಜ್ಜಾಗುತ್ತಿದ್ದಾರೆ. ಜನವರಿ 14 ರಿಂದ ಈಶಾನ್ಯ ಭಾರತದಿಂದ ಪಶ್ಚಿಮ ತೀರಕ್ಕೆ ಪ್ರಾರಂಭವಾಗಲಿರುವ ತನ್ನ ‘ಭಾರತ್ ನ್ಯಾಯ್ ಯಾತ್ರೆ’ಯನ್ನು ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ವಿಚಾರವನ್ನು ತಿಳಿಸಿದ್ದು, ‘ಭಾರತ್ ಜೋಡೋ ಯಾತ್ರೆ’ ಜನರ ಮನಸ್ಸಿನಲ್ಲಿ ಹುದುಗಿರುವ ಬ್ರ್ಯಾಂಡ್ ಆಗಿದೆ ಹೀಗಾಗಿ ನಾವು ಅದನ್ನು ಕಳೆದುಕೊಳ್ಳಬಾರದು ಎಂದು ಸಿಎಲ್‌ಪಿ ನಾಯಕರ ಸಭೆಯಲ್ಲಿ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು, ಪಿಸಿಸಿ ಮುಖ್ಯಸ್ಥರು ಒತ್ತಾಯಿಸಿದ ಕಾರಣ ಮರುನಾಮಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಮೇಶ್ ಪ್ರಕಾರ, ಭಾರತ್ ಜೋಡೋ ನ್ಯಾಯ್ ಯಾತ್ರೆ ಜನವರಿ 14 ರಂದು ಹಿಂಸಾಚಾರ ಪೀಡಿತ ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ರಾಹುಲ್ ಗಾಂಧಿ 66 ದಿನಗಳ ಅವಧಿಯಲ್ಲಿ ಪ್ರತಿದಿನ ಎರಡು ಬಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.