ನವದೆಹಲಿ: ಟಿಡಿಪಿ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್ ಆಗುವುದಾದರೆ, ಇಂಡಿಯಾ ಒಕ್ಕೂಟವು ಟಿಡಿಪಿಗೆ ಎಲ್ಲಾ ಬೆಂಬಲ ನೀಡಲಿದೆ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಜಯ್ ರಾವತ್ ಟಿಡಿಪಿಯ ಅಭ್ಯರ್ಥಿಯನ್ನೇ ಲೋಕಸಭೆ ಸ್ಪೀಕರ್ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂಬ ಮಾತುಗಳನ್ನು ನಾನು ಕೇಳಿದೆ. ಒಂದು ವೇಳೆ, ಟಿಡಿಪಿಯ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್ ಆಗುವುದಾದರೆ, ಇಂಡಿಯಾ ಒಕ್ಕೂಟದ ಪಕ್ಷಗಳು ಚರ್ಚಿಸಿ ಟಿಡಿಪಿ ಅಭ್ಯರ್ಥಿಗೇ ಬೆಂಬಲ ಸೂಚಿಸುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಹಾಗೊಂದು ವೇಳೆ, ಬಿಜೆಪಿಯವರೇ ಕಣಕ್ಕಿಳಿರೆ, ಎನ್‌ಡಿಎ ಮೈತ್ರಿಕೂಟವೇ ಛಿದ್ರವಾಗಲಿದೆ ಎಂದು ತಿಳಿಸಿದರು.
ಲೋಕಸಭೆ ಸ್ಪೀಕರ್ ಚುನಾವಣೆ ಬಹಳ ನಿರ್ಣಾಯಕವಾಗಿದ್ದು, ಬಿಜೆಪಿ ಇದರಲ್ಲಿ ಗೆಲುವು ಸಾಧಿಸಿದರೆ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿರುವ ಟಿಡಿಪಿ, ಜೆಡಿಯು ಹಾಗೂ ಚಿರಾಗ್ ಪಾಸ್ವಾನ್, ಜಯಂತ್ ಚೌಧರಿಯಂತಹವರ ಸಂಘಟನೆಗಳನ್ನು ಮುರಿಯುತ್ತಾರೆ. ಬಿಜೆಪಿ ತನಗೆ ಬೆಂಬಲ ನೀಡಿದ ಪಕ್ಷಗಳಿಗೆ ಮೋಸ ಮಾಡುತ್ತದೆ. ನಮಗೆ ಈ ಅನುಭವವಿದೆ ಎಂದರು.
ಇನ್ನು ಸಂಜಯ್ ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಯು, ಲೋಕಸಭೆ ಸ್ಪೀಕರ್ ಆಯ್ಕೆ ವಿಚಾರದಲ್ಲಿ ಬಿಜೆಪಿ ತೀರ್ಮಾನವೇ ಅಂತಿಮವಾಗಿದೆ ಎಂದು ತಿಳಿಸಿದೆ. ಆದ್ದರಿಂದ ಎನ್‌ಡಿಎ ಮೈತ್ರಿಕೂಟದಿಂದ ಲೋಕಸಭೆ ಸ್ಪೀಕರ್ ಚುನಾವಣೆಗೆ ಯಾವ ಪಕ್ಷದವರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.