ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಕಾನೂನು ಬಾಹಿರ ಎಂದು ಆರೋಪಿಸಿ ಟಿಡಿಪಿ ನಾಯಕರು ರಾಜ್ಯದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಆಂಧ್ರಪ್ರದೇಶದಲ್ಲಿ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ 9ರಂದು ಸಿಐಡಿ ಬಂಧಿಸಿದ್ದು 14 ದಿನಗಳ ಕಾಲ ಅಂದರೆ ಸೆಪ್ಟೆಂಬರ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ಸೋಮವಾರ ತೆಲುಗು ದೇಶಂ ಪಕ್ಷವು ಕರೆ ನೀಡಿರುವ ರಾಜ್ಯ ಬಂದ್‌ಗೆ ಜನಸೇನಾ ಪಕ್ಷವು ಬೆಂಬಲ ನೀಡಿದೆ.
ಈ ಬಂಧನವನ್ನು ಖಂಡಿಸಿರುವ ಜೆಎಸ್‌ಪಿ ಮುಖ್ಯಸ್ಥ ಪವನ್ ಕಲ್ಯಾಣ್, ಆಡಳಿತ ಪಕ್ಷ ವೈಎಸ್‌ಆರ್‌ಸಿಪಿ ರಾಜ್ಯದಲ್ಲಿ ಸಮಾಜವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ. ವೈಎಸ್‌ಆರ್‌ಸಿಪಿ ಸರ್ಕಾರವು ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಟಿಡಿಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಕುಮಾರ್ ಜೈನ್, ಜಗನ್ ಮೋಹನ್ ರೆಡ್ಡಿ ಅವರೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಪಿಸಿ) ಚಂದ್ರಬಾಬು ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಅವರಿಗೆ ಅರೆಸ್ಟ್ ವಾರೆಂಟ್ ಅನ್ನು ಮೊದಲು ನೀಡಿಲ್ಲ ಎಂದು ಆರೋಪಿಸಿದರು.
ಬಂದ್ ಹಿನ್ನೆಲೆಯಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶಂಖ ಬ್ರತಾ ಬಾಗ್ಚಿ ತಿಳಿಸಿದ್ದಾರೆ.