ಚಿತ್ರದುರ್ಗ: ಟಿಪ್ಪುಸುಲ್ತಾನ್ ದೇಶ ಕಂಡ ಅಪ್ರತಿಮ ಸಾಮ್ರಾಟ್, ಚಕ್ರವರ್ತಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಲೇಖಕ ಡಾ. ಕುಂ.ವೀರಭದ್ರಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ತ.ರಾ.ಸು.ರಂಗ ಮಂದಿರದಲ್ಲಿ ಶುಕ್ರವಾರ ನಡೆದ ಟಿಪ್ಪುಸುಲ್ತಾನ್ರವರ 273 ನೇ ಜಯಂತಿ ಹಾಗೂ 68 ನೇ ಕನ್ನಡ ರಾಜ್ಯೋತ್ಸವ ಉದ್ಗಾಟಿಸಿ ಮಾತನಾಡಿದರು.
ಭಾರತ ದೇಶದ ಕೇವಲ ಒಂದುವರೆ ಪರ್ಸೆಂಟ್ ಜನರಿಗೆ ಸೇರಿದ್ದಲ್ಲ. ಎಲ್ಲಾ ಜಾತಿ ಧರ್ಮದವರು ಇಲ್ಲಿ ಸಹಭಾಳ್ವೆಯಿಂದ ಬದುಕುತ್ತಿದ್ದಾರೆ. ಸ್ವಾತಂತ್ರಕ್ಕಾಗಿ ಹೋರಾಡಿದ ಸಹಸ್ರಾರು ಮುಸ್ಲಿಂರ ಅವಶೇಷಗಳಿವೆ. ಕೋಮುವಾದಿಗಳು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿವೆ. ದೇಶಕ್ಕಾಗಿ ಹೋರಾಡದೆ ಇರುವವರು ಟಿಪ್ಪು ಬಗ್ಗೆ ಇಲ್ಲ ಸಲ್ಲದ ಅಪ ಪ್ರಚಾರ ಮಾಡುತ್ತಿದ್ದಾರೆ. ಟಿಪ್ಪುಸುಲ್ತಾನ್ ಉತ್ತರಾಧಿಕಾರಿಗಳು ಕಲ್ಕತ್ತದಲ್ಲಿದ್ದಾರೆ. 35 ವರ್ಷಗಳ ಕಾಲ ಬ್ರಿಟೀಷರ ವಿರುದ್ದ ರಣಭೂಮಿಯಲ್ಲಿ ಹೋರಾಡಿದ ಟಿಪ್ಪು ಮೂರು ಕರಾಳ ಯುದ್ದಗಳನ್ನು ಎದುರಿಸಿದ್ದಾರೆ. ಕರ್ನಾಟಕಕ್ಕೆ ಸ್ವರೂಪ ಕೊಟ್ಟಿದ್ದು, ಹೈದರಾಲಿ, ಟಿಪ್ಪುಸುಲ್ತಾನ್ ಎನ್ನುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
ರೇಷ್ಮೆಯನ್ನು ಮೊಟ್ಟ ಮೊದಲು ಪರಿಚಯಿಸಿದ್ದು, ಟಿಪ್ಪುಸುಲ್ತಾನ್, ಗೋಹತ್ಯೆ ನೀಷೆಧ ಜಾರಿಗೆ ತಂದು ಹಳ್ಳಿಕಾರ್ ತಳಿಗಳ ಸಂತತಿಯನ್ನು ಉಳಿಸಿದರು. ಬಿಜೆಪಿ.ಯವರು ಟಿಪ್ಪು ಬಗ್ಗೆ ಅವಹೇಳನ ಮಾಡುತ್ತಿರುವುದರಿಂದಲೆ ಇಂದು ಟಿಪ್ಪುಜಯಂತಿ ಆಚರಣೆಯಾಗುತ್ತಿದೆ. ಮತಾಂತರ ಎಲ್ಲಾ ಕಾಲದಲ್ಲಿಯೂ ಆಗಿದೆ. ಹೈದರಾಲಿ, ಟಿಪ್ಪು ಸರ್ವ ಧರ್ಮಗಳ ಸಮನ್ವಯಕಾರರು. ಹಿಂದೂ ಧರ್ಮಕ್ಕೆ ಟಿಪ್ಪು ಕೊಟ್ಟಿರುವ ಕೊಡುಗೆಗಳ ಬಗ್ಗೆ ಕುರುಹುಗಳು ಇನ್ನು ಇವೆ ಎಂದು ಸ್ಮರಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಶಾರದಾಂಭೆಯ ಪರಮ ಭಕ್ತನಾಗಿದ್ದ ಟಿಪ್ಪುಸುಲ್ತಾನ್ ಬ್ರಿಟೀಷರ ವಿರುದ್ದ ಮಕ್ಕಳನ್ನು ಒತ್ತೆಯಿಟ್ಟು ಹೋರಾಡಿದರು. ಬೀಸೋ ಗಾಳಿ, ನೀರು, ದೀಪ, ಬೆಂಕಿಗೆ ಜಾತಿಯಲ್ಲ. ಆದರೆ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಕೋಮುವಾದಿಗಳು ಟಿಪ್ಪು ದೇಶದ್ರೋಹಿ ಎಂದು ಬಿಂಬಿಸುತ್ತಿರುವುದರಲ್ಲಿ ಅರ್ಥವಿಲ್ಲ. ಅಧಿಕಾರಕ್ಕಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ವಿಂಗಡಿಸುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಸಮಾನತೆ ಇಲ್ಲವೆನ್ನುವುದಾದರೆ ಅದು ಸಂವಿಧಾನವೆ ಅಲ್ಲ. ಜಾತಿ ಹುಟ್ಟಿನಿಂದ ಬರುವುದಲ್ಲ. ನಡೆಯಿಂದ ಬರುತ್ತೆ ಎನ್ನುವುದನ್ನು ಶರಣರು, ದಾರ್ಶನಿಕರು ಸಾರಿದ್ದಾರೆ.
ಮುಂದೆ ಸಂವಿಧಾನಕ್ಕೆ ಆಪತ್ತು ಎದುರಾಗುವ ಸಾಧ್ಯಗೆಳಿರುವುದರಿಂದ ಡಾ.ಬಿ.ಆರ್.ಅಂಬೇಡ್ಕರ್ರವರ ಸಂವಿಧಾನ ಉಳಿಯಬೇಕಾಗಿದೆ. ಅದಕ್ಕಾಗಿ ಎಲ್ಲಾ ಜಾತಿ ಧರ್ಮದವರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಸಿದ್ದರಾಮಯ್ಯ ಸರ್ಕಾರ ಐದು ಉಚಿತ ಗ್ಯಾರೆಂಟಿಗಳನ್ನು ನೀಡಿದೆ. ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವವರು ಗ್ಯಾರೆಂಟಿಗಳ ಅನುಕೂಲ ಪಡೆದುಕೊಂಡಿದ್ದಾರೆ. ನಮ್ಮದು ಸರ್ವ ಜನಾಂಗದ ಶಾಂತಿಯ ಸರ್ಕಾರ ಎಂದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಬಿ.ಕಾಂತರಾಜ್, ಮಂಜುನಾಥಗೊಪ್ಪೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಚಳ್ಳಕೆರೆ ನಗರಸಭೆ ಸದಸ್ಯ ನಾಗರಾಜ್, ಹೋರಾಟಗಾರ ಆರ್.ಶೇಷಣ್ಣಕುಮಾರ್, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಮುನಿರಾ ಎ.ಮಕಾಂದಾರ್, ಮೆಹಬೂಬ್ಖಾತೂನ್, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಹನೀಪ್, ಸೈಯದ್ ಹನೀಸ್, ಅಲ್ಲಾಭಕ್ಷಿ, ಡಿ.ಎನ್.ಮೈಲಾರಪ್ಪ, ಹೆಚ್.ಶಬ್ಬೀರ್ಭಾಷ, ಸೈಯದ್ ಅಬ್ದುಲ್ಲಾ, ಹಣ್ಣಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಮೀವುಲ್ಲಾ, ಎ.ಜಾಕೀರ್ ಹುಸೇನ್, ಎ.ಸಾಧಿಕ್ವುಲ್ಲಾ, ನಿವೃತ್ತ ಡಿ.ವೈ.ಎಸ್ಪಿ. ಅಬ್ದುಲ್ರೆಹಮಾನ್ ಸೇರಿದಂತೆ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಕನ್ನಡಪ್ರಭ ಹಿರಿಯ ವರದಿಗಾರ ಚಿಕ್ಕಪ್ಪನಹಳ್ಳಿ ಷಣ್ಮುಖರವರಿಗೆ ಭಾವೈಕ್ಯ ರತ್ನ ಪ್ರಶಸ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪನವರಿಗೆ ಸರಳ ಮತ್ತು ಜಾತ್ಯಾತೀತ ರತ್ನ ಪ್ರಶಸ್ತಿ, ಡಾ.ಕುಂ.ವೀರಭದ್ರಪ್ಪನಿಗೆ ಕ್ರಾಂತಿಕಾರ ಲೇಖಕ ಪ್ರಶಸ್ತಿ, ಕುಸ್ತಿಪಟು ಸದ್ದಾಂಹುಸೇನ್ಗೆ ಟಿಪ್ಪುಸುಲ್ತಾನ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.