ರಜೌರಿ/ಜಮ್ಮು: ಟಿಫನ್ ಬಾಕ್ಸ್ ನಲ್ಲಿ ಇರಿಸಿದ್ದ 4 ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮತ್ತು 2 ಡಜನ್ ಎ.ಕೆ ಸರಣಿಯ ಬಂದೂಕಿನ ಬುಲೆಟ್ ಗಳನ್ನು ಸಿಆರ್ ಪಿಎಫ್ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಜಮ್ಮು ವಲಯದ ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಪ್ಯಾರಾ ಮಿಲಿಟರಿ ಪಡೆಯು ಹಯತ್ಪುರ–ಮಂಜಕೋಟ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯನ್ನು ಸಿಆರ್ ಪಿಎಫ್ ನ 237ನೇ ಬೆಟಾಲಿಯನ್ ನ ಸಿ ಕಂಪನಿ ಪಡೆಗಳು ಮತ್ತು ಪೊಲೀಸರ ಜಂಟಿಯಾಗಿ ನಡೆಸಿದರು.
ಕಾರ್ಯಾಚರಣೆಯಲ್ಲಿ ಟಿಫನ್ ಬಾಕ್ಸ್ ನಲ್ಲಿ ಅಳವಡಿಸಿದ್ದ 4 ಐಇಡಿಗಳು, ಎ.ಕೆ ಸರಣಿಯ ಬಂದೂಕಿನ 23 ಜೀವಂತ ಗುಂಡುಗಳು, ವೈರ್ ಲೆಸ್ ಉಪಕರಣ ಮತ್ತು ಟೇಪ್‌ರೆಕಾರ್ಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಪೂಂಚ್–ರಜೌರಿ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದೆರಡು ವರ್ಷಗಳಿಂದ ಇಲ್ಲಿ ಪಾಕಿಸ್ತಾನಿ ಉಗ್ರರ ಉಪಟಳ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಈ ವಲಯದಲ್ಲಿ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸಿಆರ್ ಪಿಎಫ್, ಸೇನೆ ಮತ್ತು ರಾಷ್ಟ್ರೀಯ ರೈಫಲ್ ಪಡೆಯನ್ನು ನಿಯೋಜಿಸಿದೆ.