ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿಂಡೀಸ್​ನಲ್ಲಿ ಟೀಮ್​ ಇಂಡಿಯಾ ಲಾಕ್​! – ರೋಹಿತ್ ಪಡೆಗೆ ಆತಂಕ

ಬಾರ್ಬಡೋಸ್ ​: ವೆಸ್ಟ್​ಇಂಡೀಸ್​ನಲ್ಲಿ ಜೂನ್​ 29ರಂದು ನಡೆದ ಟಿ20 ವಿಶ್ವಕಪ್​ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಟ್ರೋಫಿಗೆ ಮುತ್ತಿಡುವ ಮೂಲಕ ಟೀಮ್​ ಇಂಡಿಯಾ ಹೊಸ ಇತಿಹಾಸವನ್ನು ಬರೆದಿದೆ. 13 ವರ್ಷಗಳ ಬಳಿಕ ವಿಶ್ವಕಪ್​ ಭಾರತದ ಪಾಲಾಗಿದೆ. ಇದೇ ಖುಷಿಯಲ್ಲಿರುವ ಟೀಮ್​ ಇಂಡಿಯಾ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತವರಿಗೆ ಹಿಂದಿರುಗಲು ಸಾಧ್ಯವಾಗದೇ ಕೆರಿಬಿಯನ್​ ನಾಡಲ್ಲಿ ಸಿಲುಕಿಕೊಂಡಿದ್ದಾರೆ. ವಿಂಡೀಸ್​ನಲ್ಲಿ ಭಾರೀ ಮಳೆ ಮತ್ತು ಚಂಡಮಾರುತದ ಎಚ್ಚರಿಕೆಗಳು ಸೇರಿದಂತೆ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಟೀಮ್​ ಇಂಡಿಯಾದ ಸದಸ್ಯರು ತವರಿಗೆ ಬರುವುದು ವಿಳಂಬವಾಗಿದೆ. ಸದ್ಯ ಎಲ್ಲರೂ ಹೋಟೆಲ್‌ನಲ್ಲಿ ತಂಗಿದ್ದಾರೆ. ಹವಾಮಾನವು ಅನುಕೂಲಕರವಾಗಿದ್ದರೆ, ರೋಹಿತ್ ಶರ್ಮ ಮತ್ತು ತಂಡ ಮಂಗಳವಾರ ಅಥವಾ ಬುಧವಾರ ತವರಿಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ. ಚಂಡಮಾರುತದ ಎಚ್ಚರಿಕೆಯಿಂದಾಗಿ ಬಾರ್ಬಡೋಸ್ ವಿಮಾನ ನಿಲ್ದಾಣವನ್ನು ಪ್ರಸ್ತುತ ಮುಚ್ಚಲಾಗಿದೆ. ಇತ್ತ ಭಾರತದಲ್ಲಿ ಕಪ್‌ನೊಂದಿಗೆ ತವರಿಗೆ ಮರಳಲಿರುವ ಟೀಮ್​ ಇಂಡಿಯಾಗೆ ಅದ್ಧೂರಿ ಸ್ವಾಗತವನ್ನು ಸಿದ್ಧಪಡಿಸಲು ಬಿಸಿಸಿಐ ಮುಂದಾಗಿದೆ. ಇದೇ ಸಂದರ್ಭದಲ್ಲಿ ಭಾರತದ ವಿಶ್ವಕಪ್​ ಕಿರೀಟವನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಜೂನ್​ 29ರಂದು ಭಾರತ ಫೈನಲ್‌ನಲ್ಲಿ ಗೆದ್ದಾಗಿನಿಂದ ಗ್ರಾಮೀಣ ಮತ್ತು ನಗರ ಪ್ರದೇಶವೆಂಬ ಭೇದವಿಲ್ಲದೆ ಇಡೀ ದೇಶದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇಡೀ ರಾಷ್ಟ್ರವು ರೋಹಿತ್​ ಪಡೆಯ ವಿಜಯವನ್ನು ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಆಚರಿಸಿದೆ. ವಿಶ್ವಕಪ್ ಗೆದ್ದ ಆಟಗಾರರಿಗೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಕೂಡ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement