ಪುಣೆ: ಮಂಗಳಮುಖಿಯರು ಅಥವಾ ತೃತೀಯ ಲಿಂಗಿಯರು ಟ್ರಾಫಿಕ್, ಬಸ್ ಹಾಗೂ ರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ.
ಯಾರೂ ಕೆಲಸ ಕೊಡುವುದಿಲ್ಲ ಅಂತಾ ಬದುಕಲು ಬೇರೆ ದಾರಿ ಇಲ್ಲದೆ ಹಣ ಕೇಳುತ್ತಾರೆ. ಕೆಲವೊಮ್ಮೆ ಹಣ ಕೊಡದಿದ್ದರೆ ಅಸಭ್ಯವಾಗಿಯೂ ವರ್ತಿಸುವ ಮೂಲಕ ಟೀಕೆಗು ಗುರಿಯಾಗುತ್ತಾರೆ. ಟ್ರಾಫಿಕ್ಗಳಲ್ಲಂತೂ ಹಣಕ್ಕೆ ಬೇಡಿಕೆ ಇಡುವ ಇವರು, ಹಣ ಕೊಡದಿದ್ದಾಗ ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರದ ಪುಣೆ ಪೊಲೀಸರು ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದನ್ನು ಬ್ಯಾನ್ ಮಾಡಿದ್ದಾರೆ. ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ಟ್ರಾಫಿಕ್ ಜಂಕ್ಷನ್‌ಗಳಲ್ಲಿ ತೃತೀಯಲಿಂಗಿಗಳು ಜಮಾಯಿಸಿ, ಪ್ರಯಾಣಿಕರಿಂದ ಬಲವಂತವಾಗಿ ಹಣಕ್ಕಾಗಿ ಒತ್ತಾಯಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಪೊಲೀಸರು ಸ್ವೀಕರಿಸಿದ ಹಲವಾರು ದೂರುಗಳಿಗೆ ಪ್ರತಿಕ್ರಿಯೆಯಾಗಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅಮಿತೇಶ್ ಕುಮಾರ್ ಹೇಳಿದ್ದಾರೆ. ನಾವು ಸಿಆರ್ಪಿಸಿ ಸೆಕ್ಷನ್ 144ರ ಅಡಿಯಲ್ಲಿ ತೃತೀಯಲಿಂಗಿ ವ್ಯಕ್ತಿಗಳು ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಜಮಾಯಿಸುವುದನ್ನು ಮತ್ತು ವಾಹನ ಚಾಲಕರು ಹಾಗೂ ಪ್ರಯಾಣಿಕರಿಂದ ಬಲವಂತವಾಗಿ ಹಣಕ್ಕಾಗಿ ಒತ್ತಾಯಿಸುವುದನ್ನು ನಿಷೇಧಿಸಿದ್ದೇವೆ. ಇದಲ್ಲದೆ, ತೃತೀಯಲಿಂಗಿಗಳು ಹಬ್ಬಗಳು, ಜನನ ಮತ್ತು ಸಾವಿನ ಸಮಯದಲ್ಲಿ ಮನೆ ಮತ್ತು ಸಂಸ್ಥೆಗಳಿಗೆ ಭೇಟಿ ನೀಡುವುದನ್ನು ಗಮನಿಸಿದ್ದೇವೆ. ಈ ವೇಳೆ ಸ್ವಯಂಪ್ರೇರಣೆಯಿಂದ ನೀಡುವ ಹಣಕ್ಕಿಂತ ಹೆಚ್ಚಿನ ಹಣವನ್ನು ಬಲವಂತವಾಗಿ ಪಡೆಯುತ್ತಿದ್ದಾರೆ.
ಆದರೆ, ಆಹ್ವಾನವಿಲ್ಲದೆ ಮನೆಗಳಿಗೆ ಭೇಟಿ ನೀಡುವುದನ್ನು ಈ ಆದೇಶದ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. ಆದೇಶವನ್ನು ಉಲ್ಲಂಘಿಸಿದ್ದೇ ಆದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶಕ್ಕೆ ಅವಿಧೇಯತೆ), 143, 144, 147, 159, 268, 384, 385, 503, 504, 506, ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಸಂಬಂಧಿತ ಸೆಕ್ಸನ್ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಮಿತೇಶ್ ಕುಮಾರ್ ಹೇಳಿದ್ದಾರೆ.