ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಡಬಲ್ ಮರ್ಡರ್‌ಗೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಇದೊಂದು ಸುಫಾರಿ ಕೊಲೆ ಎಂಬುದು ಬಹಿರಂಗವಾಗಿದೆ.
ಜಿ-ನೆಟ್ ಕಂಪನಿ ಮಾಲೀಕ ಅರುಣ್ ಕುಮಾರ್ ಎಂಬಾತನೇ ವೈಷಮ್ಯದ ಹಿನ್ನಲೆಯಲ್ಲಿ ಏರೋನಿಕ್ಸ್ ಕಂಪನಿ ಎಂಡಿ ಫಣೀಂದ್ರ ಅವರನ್ನು ಕೊಲೆ ಮಾಡುವುದಕ್ಕೆ ತನ್ನ ಉದ್ಯೋಗಿ ಫಿಲಿಕ್ಸ್‌ಗೆ ಸುಫಾರಿ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಕೊಲೆಯಾದ ಫಣೀಂದ್ರ, ವಿನುಕುಮಾರ್ ಇಬ್ಬರೂ ಜಿ-ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಫಿಲೆಕ್ಸ್ ಕೂಡಾ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಫಣೀಂದ್ರ, ವಿನುಕುಮಾರ್ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದರು. ಜಿ-ನೆಟ್ ಕಂಪನಿಯ ಹಲವು ನೌಕರರು ಫಣೀಂದ್ರ ಕಂಪನಿಗೆ ಸೇರಿದ್ದರು. ಇದರಿಂದ ಜಿ-ನೆಟ್ ಕಂಪನಿ ನಷ್ಟಕ್ಕೆ ಸಿಲುಕಿತ್ತು. ಇದರಿಂದ ಅರುಣ್ ಆಕ್ರೋಶಗೊಂಡಿದ್ದ.
ಅಲ್ಲಿಂದ ಹೊರಬಂದು ಪ್ರತ್ಯೇಕ ಸಂಸ್ಥೆ ಮಾಡಿರುವುದಕ್ಕೆ ಸಿಟ್ಟಿನಿಂದ ಫಿಲಿಕ್ಸ್ ಮೂಲಕ ಕೊಲೆ ಮಾಡಿಸಿರುವುದಾಗಿ ಆರೋಪಿಗಳ ಪೈಕಿ ಅರುಣ್ ತಪ್ಪೊಪ್ಪಿಕೊಂಡಿದ್ದಾನೆ. ಎಎಪಿ ಮುಖಂಡ ಕೂಡ ಆಗಿರುವ ಅರುಣ್ ಕುಮಾರ್ ಅನ್ನು ಬಂಧಿಸಲಾಗಿದೆ.