ಕೌಶಂಬಿ:ಯಮುನಾ ನದಿಯಿಂದ ಅಕ್ರಮವಾಗಿ ಡಾಲ್ಫಿನ್ ಮೀನನ್ನು ಹಿಡಿದು ತಿಂದ ಆರೋಪದಡಿ ಒಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ. ಈ ಕುರಿತು ಸೋಮವಾರ ಚೈಲ್ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ದೂರನ್ನು ನೀಡಿದ್ದಾರೆ. ದೂರಿನ ಆಧಾರದ ಮೇಲೆ ರಂಜೀತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜುಲೈ 22ರಂದು ಬೆಳಿಗ್ಗೆ ನಸೀರ್‌ಪುರ ಗ್ರಾಮದ ನಾಲ್ವರು ಮೀನುಗಾರರು ಯಮುನಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಡಾಲ್ಫಿನ್ ಮೀನು ಬಲೆಗೆ ಬಿದ್ದಿದೆ. ಕೂಡಲೇ ಅವರು ನದಿಯಿಂದ ಡಾಲ್ಫಿನ್ನ್ನು ತಮ್ಮ ಭುಜದ ಮೇಲೆ ಮನೆಗೆ ಸಾಗಿಸಿ ಮನೆಯಲ್ಲಿ ಅದನ್ನು ಬೇಯಿಸಿ ತಿಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೀನುಗಾರರು ಡಾಲ್ಫಿನ್ನ್ನು ಮನೆಗೆ ಸಾಗಿಸುತ್ತಿರುವ ವೇಳೆ ಕೆಲವು ದಾರಿಹೋಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಇದೀಗ ರಂಜೀತ್ ಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.