ಬೆಳಗಾವಿ : ಬೆಳಗಾವಿ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪದ ಬಗ್ಗೆ ಮುನಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಇದೀಗ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಜೊತೆ ಅಡ್ಜಸ್ಟ್ಮೆಂಟ್ ಎನ್ನುವ ಪ್ರಶ್ನೆ ಇಲ್ಲ. ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕು.ನಮ್ಮ ಹಂತದಲ್ಲಿ ಏನೂ ಇಲ್ಲ ಎಂದು ಹೇಳಿದರು.
ನಾನು ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ ಎಂದ ಅವರು, ಮೈಸೂರಿಗೆ ಹೋಗುವ ಉದ್ದೇಶ ಬೇರೆ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಉದ್ದೇಶವೇ ಬೇರೆ ಎಂದರು.
ಲೋಕಸಭೆ ಚುನಾವಣೆಯಾದ ಬಳಿಕ ಚರ್ಚೆಗೆ ಬರಬಹುದು. ಚುನಾವಣೆ ಬಳಿಕ ಯಾವ ಹೊಸ ವಿಚಾರ ಬರುತ್ತವೆಂದು ಕಾದು ನೋಡೋಣ ಎಂದು ತಿಳಿಸಿದರು.
ಜಾರಕಿಹೊಳಿ ಅವರು ಶಾಸಕರನ್ನು ಕರೆದುಕೊಂಡು ಮೈಸೂರು ಪ್ರವಾಸಕ್ಕೆ ಹೊರಡಲು ಮುಂದಾಗಿದ್ದ ಕುರಿತು ಇತ್ತೀಚೆಗೆ ಕಾಂಗ್ರೆಸ್ನ ಆಂತರಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಬಳಿಕ ಹೈಕಮಾಂಡ್ ಮಧ್ಯ ಪ್ರವೇಶಿಸಿ ಪ್ರವಾಸ ರದ್ದಾಗುವಂತೆ ಮಾಡಿತ್ತು. ನಂತರ ಸತೀಶ್ ಜಾರಕಿಹೊಳಿ ಶಾಸಕರ ಜತೆ ದುಬೈಗೆ ಪ್ರವಾಸ ಹೋಗಲಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲವನ್ನು ಸೃಷ್ಟಿಸಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು, ಶಾಸಕರು ಅವರ ದುಡ್ಡಲ್ಲಿ ಪ್ರವಾಸ ಹೋದರೆ ನಮಗೇನು ಎಂದು ಪ್ರತಿಕ್ರಿಯಿಸಿದ್ದರು.