ಬೆಂಗಳೂರು: ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನೀಡಿದ್ದ ಆದೇಶವನ್ನು ಹಿಂಪಡೆದ ಕರ್ನಾಟಕದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಬಿಜೆಪಿ ಶಾಸಕ ಯತ್ನಾಳ್ ಅರ್ಜಿ ವಿಚಾರಣೆ ವೇಳೆ ಈ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗುವ ಬಗ್ಗೆ ಕೋರ್ಟ್ ಸಿಬಿಐ ಅಭಿಪ್ರಾಯ ಕೇಳಿತ್ತು. ಕೋರ್ಟ್ ಅಭಿಪ್ರಾಯ ಕೇಳಿದ್ದ ಹಿನ್ನೆಲೆಯಲ್ಲಿ ಸಿಬಿಐನಿಂದಲೂ ಈಗ ಅರ್ಜಿ ಸಲ್ಲಿಕೆಯಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಿಬಿಐ ತನಿಖೆಗೆ ನೀಡಿದ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿತ್ತು. ರಾಜ್ಯ ಸರ್ಕಾರ ನೀಡಿರುವ ಲೋಕಾಯುಕ್ತ ತನಿಖೆಗೆ ತಡೆ ನೀಡಬೇಕು ಮತ್ತು ಸರ್ಕಾರ ಮಾಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಯತ್ನಾಳ್ ಪರ ವಕೀಲರು ಮನವಿ ಮಾಡಿದ್ದರು. ಲೋಕಾಯುಕ್ತ ತನಿಖೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಒಂದು ವೇಳೆ ತನಿಖೆ ನ್ಯಾಯಬದ್ಧವಾಗಿಲ್ಲ ಎಂದಾದರೆ ಮತ್ತೆ ಸುಪ್ರೀಂಕೋರ್ಟ್ ಸಂಪರ್ಕ ಮಾಡಬಹುದು ಎಂದು ಸೂಚಿಸಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಲೋಕಾಯುಕ್ತದಲ್ಲಿ ತನಿಖೆ ಮುಂದುವರೆಸಬಹುದು ಎಂದು ಆದೇಶದಲ್ಲಿ ತಿಳಿಸಿತ್ತು. ರಾಜ್ಯ ಸರ್ಕಾರ- ಸಿಬಿಐ ನಡುವೆ ಘರ್ಷಣೆಗೆ ಕಾರಣವಾದ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಬಗೆಹರಿಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟು ಯತ್ನಾಳ್ ಮತ್ತು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯತ್ನಾಳ್ ಮೇಲ್ಮನವಿ ಸಲ್ಲಿಸಿದ್ದರೆ ಸಿಬಿಐ ಮೇಲ್ಮನವಿ ಸಲ್ಲಿಸಿರಲಿಲ್ಲ. 2017 ರಲ್ಲಿ ಡಿಕೆ.ಶಿವಕುಮಾರ್ ವಾಸ್ತವ್ಯವಿದ್ದ ಈಗಲ್‌ಟನ್ ರೆಸಾರ್ಟ್ ಮತ್ತು ಅವರ ಸಹಚರರ ಮೇಲೆ ದಾಳಿ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಸುಮಾರು 8.59 ಕೋಟಿ ಹಣ ವಶಪಡಿಸಿಕೊಂಡಿತ್ತು. ಲೆಕ್ಕಕ್ಕೆ ಸಿಗದ ಈ ಹಣವನ್ನು ಡಿ.ಕೆ.ಶಿವಕುಮಾರ್ ತಮ್ಮ ಸಹಚರರ ಬಳಿ ಇರಿಸಿದ್ದರು ಎಂದು ಆರೋಪಿಸಿತ್ತು. ಇದೇ ಪ್ರಕರಣದಲ್ಲಿ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದ ಇಡಿ ಪಿಸಿ ಆ್ಯಕ್ಟ್ ನಡಿ ತನಿಖೆ ನಡೆಸಲು ಸಿಬಿಐಗೆ ನೀಡಲು ಶಿಫಾರಸ್ಸು ಮಾಡಿತ್ತು. ಶಿಫಾರಸ್ಸು ಆಧರಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ನೀಡಿತ್ತು. ಸಿದ್ದರಾಮಯ್ಯ ಸರ್ಕಾರ ಸಿಬಿಐಗೆ ನೀಡಿದ ಪ್ರಕರಣವನ್ನು ಹಿಂಪಡೆದು ಲೋಕಾಯುಕ್ತಕ್ಕೆ ನೀಡಿತ್ತು.
