ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವುದಕ್ಕೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವಿಜಯೇಂದ್ರ, ಸಂವಿಧಾನದ ಘನತೆ, ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ತನ್ನದಲ್ಲದ ತಪ್ಪಿಗೂ ನೈತಿಕ ಹೊಣೆ ಹೊತ್ತು ಅಧಿಕಾರ ತ್ಯಾಗ ಮಾಡಿದ ಹಲವು ಮಹನೀಯರು ಗೌರವದ ರಾಜಕಾರಣಕ್ಕೆ ಇತಿಹಾಸ ಬರೆದು ಹೋಗಿದ್ದಾರೆ.
ಕರ್ನಾಟಕದ ರಾಜಕಾರಣಕ್ಕೆ ಕರಾಳ ಇತಿಹಾಸ ಬರೆಯಲೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ಸಂಪುಟ ಸದಸ್ಯ ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಸಿಬಿಐ ತನಿಖೆಯ ಕೇಸ್ ಹಿಂತೆಗೆದುಕೊಳ್ಳುವ ನಿಲುವು ತಳೆದಿರುವುದು ಸಾಂವಿಧಾನಿಕ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಸವಾರಿ ಮಾಡಿದ ಕ್ರಮವಾಗಿದೆ ಎಂದು ಟೀಕಿಸಿದ್ದಾರೆ.
ಈ ಕ್ರಮ ನ್ಯಾಯದ ಅನ್ವೇಷಣೆಯನ್ನು ಗಂಭೀರವಾಗಿ ದುರ್ಬಲಗೊಳಿಸುವುದಲ್ಲದೆ, ಡಿಕೆ ಶಿವಕುಮಾರ್ ವಿರುದ್ಧದ ಗಂಭೀರ ಆರೋಪಗಳನ್ನು ಪರಿಹರಿಸುವಲ್ಲಿ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಹಾಳುಮಾಡುತ್ತದೆ ಎಂದು ಕಿಡಿಕಾರಿದ್ದಾರೆ..
ಡಿಸಿಎಂ ಡಿಕೆಶಿ ಅನುಪಸ್ಥಿತಿಯಲ್ಲಿ ಗುರುವಾರ ಸಚಿವ ಸಂಪುಟ ನಡೆಯಿತು. ಸಂಪುಟ ಸಭೆಯಲ್ಲಿ ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸರ್ಕಾರ ವಾಪಸ್ ಪಡೆಯಲು ತೀರ್ಮಾನಿಸಿತು.
ಯಡಿಯೂರಪ್ಪ ನೇತೃತ್ವದ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಇದೇ 29 ರಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಅಂದಿನ ವಿಚಾರಣೆಯಲ್ಲಿ ಸಚಿವ ಸಂಪುಟದ ತೀರ್ಮಾನವನ್ನು ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ.