ಜ್ಯೂರಿಚ್: ವಿಶ್ವ ಚಾಂಪಿಯನ್‌ಷಿಪ್‍ನಲ್ಲಿ ಚಿನ್ನದ ಪದಕಕ್ಕೆ ತಮ್ಮದಾಗಿಸಿಕೊಂಡಿದ್ದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಜೂರಿಚ್ ವಿಶ್ವ ಚಾಂಪಿಯನ್ ಡೈಮಂಡ್ ಲೀಗ್‍ನಲ್ಲಿ ಎಡವಿದ್ದಾರೆ. 85.71 ಮೀಟರ್ ದೂರ ಭರ್ಚಿ ಎಸೆದ ಅವರು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಝೆಕ್ ಗಣರಾಜ್ಯದ ಜಾಕೊಬ್ ವಾಡ್ಲಿಚ್ 85.86 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ. ಜರ್ಮಿನಿಯ ಜೂಲಿಯನ್ ವೆಬರ್ ಅವರು 85.04 ಮೀಟರ್ ಭರ್ಜಿ ಎಸೆದು 3ನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಬುಡಾಪೆಸ್ಟ್ ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‍ನ ಪುರುಷರ ವಿಭಾಗದಲ್ಲಿ ನೀರಜ್ ಜೋಪ್ರಾ ಅವರು 88.17 ಮೀಟರ್ ದೂರ ಜಾವೆಲಿನ್ ಥ್ರೋ ಮಾಡಿ ಚಿನ್ನದ ಪದಕ ಜಯಿಸಿದ್ದರು. 2022ರಲ್ಲಿ ಬೆಳ್ಳಿ ಪದಕ ಗಳಿಸಿದ್ದ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.