ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ: ಸಿಇಓ ಎಸ್.ಜೆ.ಸೋಮಶೇಖರ್.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಜೊತೆಗೆ ಉತ್ತಮ ಆಡಳಿತ ನೀಡಲು ತಂತ್ರಜ್ಞಾನ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್ ಅಭಿಪ್ರಾಯಪಟ್ಟರು.

ಕರ್ನಾಟಕ ಲೋಕಾಯುಕ್ತ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ, ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರದ ಪರಿಣಾಮವಾಗಿ ಸರ್ಕಾರಿ ಯೋಜನೆಗಳ ಜಾರಿಯಲ್ಲಿ ವಿಳಂಬವಗುತ್ತದೆ. ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರೆಯುವುದಿಲ್ಲ. ಇದನ್ನು ತಪ್ಪಿಸುವ ಸಲುವಾಗಿ ಸಕಾಲ ಹಾಗೂ ಇ-ಆಫೀಸ್ ತಂತ್ರಜ್ಞಾನವನ್ನು ಆಡಳಿತದಲ್ಲಿ ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರ ಕೆಲಸದಲ್ಲಿ ವಿನಾಕಾರಣ ಉಂಟಾಗುವ ವಿಳಂಬ ತಪ್ಪುತ್ತದೆ. ಅಧಿಕಾರಿಗಳ ಸಹ ತಮ್ಮ ಅಧೀನದಲ್ಲಿರುವ ಕಚೇರಿಗಳಲ್ಲಿ ಕಡತಗಳನ್ನು ಇ-ಆಫೀಸ್ ಮೂಲಕವೇ ವಿಲೇವಾರಿ ಮಾಡಬೇಕು. ಪರಿಣಾಮಕಾರಿ ಆಡಳಿತದ ದೃಷ್ಠಿ ಒಂದೇ ವಿಭಾಗದಲ್ಲಿ ಬಹು ವರ್ಷಗಳಿಂದ ಕೆಲಸ ಮಾಡುವ ಸಿಬ್ಬಂದಿಯನ್ನು ಬೇರೆ ವಿಭಾಗಕ್ಕೆ ನಿಯೋಜಿಸಬೇಕು. ಇದರಿಂದ ಭ್ರಷ್ಟಾಚಾರ ಮಾಡಲು ಆಸ್ಪದ ಉಂಟಾಗವುದಿಲ್ಲ. ಇದೇ ರೀತಿ ಉನ್ನತ ಅಧಿಕಾರಿಗಳು ಸಹ ಭ್ರಷ್ಟಚಾರದಲ್ಲಿ ತೊಡಗದಂತೆ ತಡೆಯಲು ಸರ್ಕಾರ ಸಹ ನಿಯಮತವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತದೆ ಎಂದು ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.

ಸರ್ಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುವಾಗ ಹಣದ ವಹಿವಾಟು ಇರುತ್ತದೆ. ಇದನ್ನು ನಿರ್ವಹಣೆ ಮಾಡುವ ಹೊಣೆ ಸರ್ಕಾರಿ ಅಧಿಕಾರಿ ಹಾಗೂ ನೌಕರರದು. ನಿಯಮಗಳಿಗೆ ಬದ್ದವಾಗಿಯೇ ಯೋಜನೆಗಳನ್ನು ಜಾರಿ ಮಾಡಬೇಕು. ಇಂತಹ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿ ಹಾಗೂ ನೌಕರರು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿ ಭ್ರಷ್ಟಾಚಾರ ಎಸಗಿದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲು ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಭ್ರಷ್ಟಾಚಾರ ಹಾಗೂ ಯೋಜನೆಗಳ ಜಾರಿಯಲ್ಲಿ ವಿಳಂಬ ಆಗುವುದನ್ನು ತಪ್ಪಿಸಲು ಲೋಕಾಯುಕ್ತ ಮುಂಜಾಗೃತವಾಗಿ ಕಣ್ಗಾವಲು ಇರಿಸುತ್ತದೆ. ಒಂದು ವೇಳೆ ಭ್ರಷ್ಟಾಚಾರದ ದೂರು ಕೇಳಿ ಬಂದರೆ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುತ್ತದೆ. ತಪ್ಪಿತಸ್ಥ ಅಧಿಕಾರಿ ಹಾಗೂ ನೌಕರರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಯಾದರೆ, ಇದು ಇತರೆ ಅಧಿಕಾರಿ ಹಾಗೂ ನೌಕರರಿಗೂ ಎಚ್ಚರಿಕೆ ಎನಿಸುತ್ತದೆ ಎಂದು ಸಿಇಓ ಎಸ್.ಜೆ.ಸೋಮಶೇಖರ್ ಅಭಿಪ್ರಾಯಪಟ್ಟರು.

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, ಲೋಕಾಯುಕ್ತ ಕಾಯ್ದೆ ಹಾಗೂ ಸರ್ಕಾರಿ ನೌಕರರ ನಡವಳಿಕೆ ಹಾಗೂ ನಿಯಮಗಳ ಕುರಿತು ನೌಕರರಲ್ಲಿ ಜಾಗೃತಿ ಮೂಡಿಸುಬೇಕು. ಜೊತೆಗೆ, ನೈತಿಕ ಮೌಲ್ಯಗಳನ್ನು ಸಹ ಅಳವಡಿಸಿಕೊಳ್ಳುವಂತೆ ನೌಕರರಿಗೆ ಪ್ರೇರೆಪಿಸಬೇಕು ಎಂದು ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಆಡಳಿತದಲ್ಲಿ ಪಾರ್ದರ್ಶಕತೆ ನೈತಿಕತೆ ಹಾಗೂ ಮಾನವೀಯ ಗುಣಗಳನ್ನು ಅಧಿಕಾರಿ ಹಾಗೂ ನೌಕರರು ಅಳವಡಿಸಿಕೊಳ್ಳಬೇಕು. ಸರ್ಕಾರ ಕಾಲ ಕಾಲಕ್ಕೆ ನೌಕರರಿಗೆ ವೇತನ ಆಯೋಗಳನ್ನು ನೀಡುವ ಮೂಲಕ ಸಾಕಷ್ಟು ಆರ್ಥಿಕ ಸೌಲಭ್ಯಗಳನ್ನು ನೀಡಿದೆ. ಸಾರ್ವಜನಿಕರನ್ನು ಕಚೇರಿ ಅಲೆದಾಡಿಸದೇ ನಿಗದಿತ ಸಮಯದಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ ಶೇ.70 ರಷ್ಟು ಸರ್ಕಾರಿ ನೌಕರರು ಕಳವರ್ಗ ಹಾಗೂ ಬಡತನದಿಂದ ಬಂದವರು. ಇದನ್ನು ಮನದಲ್ಲಿ ಇಟ್ಟುಕೊಂಡು ರೈತರು ಹಾಗೂ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಕೆಲಸದಲ್ಲಿ ತೃಪ್ತಿ ಹೊಂದುವ ಜೊತೆಗೆ, ಮಾನವೀಯತೆ ಹಾಗೂ ಕರುಣೆಯಿಂದ ಸಾರ್ವಜನಿಕರ ಸೇವೆ ಮಾಡಬೇಕು ಎಂದರು.

ಉಪ ಅರಣ್ಯಸಂರಕ್ಷಕ ರಾಜಣ್ಣ ಮಾತನಾಡಿ, ಪ್ರಾಮಾಣಿಕವಾಗಿ ಹಾಗೂ ನಿಯಮಬದ್ದವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ನೌಕರರಿಗೆ ಲೋಕಾಯುಕ್ತದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ್, ಯಾವುದೇ ಪೂರ್ವಾಗ್ರಹ ಪೀಡಿತವಾಗಿ ಲೋಕಾಯುಕ್ತ ಸಂಸ್ಥೆ ಅಧಿಕಾರಿ ಹಾಗೂ ನೌಕರರ ವಿರುದ್ದ ಕಾರ್ಯಾಚರಣೆ ನಡೆಸುವುದಿಲ್ಲ. ಆಪಾದನೆ ಕೇಳಿಬಂದ ಅಧಿಕಾರಿ ಹಾಗೂ ನೌಕರರ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವುದರೊAದಿಗೆ, ಅವರ ಮೇಲೆ ಬಹುದಿನಗಳ ಕಾಲ ನಿಗಾ ಇರಿಸಲಾಗುತ್ತದೆ. ಕೇಳಿದ ಬಂದ ಆಪಾದನೆ ನೂರಷ್ಟು ಸತ್ಯವಾಗಿದ್ದು, ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುವುದು, ವಿಳಂಬ ಮಾಡಿರುವುದರ ಬಗ್ಗೆ ಸಾಕ್ಷಾö್ಯಧಾರಗಳು ಪೂರಕವಾಗಿದ್ದಾಗ ಮಾತ್ರವೇ ಪರಿಶೀಲನೆ ನಡೆಸಿ, ಲೋಕಾಯುಕ್ತ ಎ.ಡಿ.ಜಿ.ಪಿ ಅವರ ಅನುಮತಿಯ ಮೇರೆಗೆ ದಾಳಿ ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ದುರುದ್ದೇಶ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಲೋಕಾಯುಕ್ತ ಉಪಾಧೀಕ್ಷಕ ಮೃತ್ಯುಂಜಯ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸುವುದರೊಂದಿಗೆ, ಭ್ರಷ್ಟಾಚಾರ ಪ್ರತಿಬಂಧಕ ಹಾಗೂ ಲೋಕಾಯುಕ್ತ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon