ಬೆಂಗಳೂರು: ನಿನ್ನೆ ಸಾಯಂಕಾಲವೇ ಶುರುವಾದ ಮಳೆ ರಾತ್ರಿಯಾದ ಮೇಲಂತೂ ನಿರಂತರ ಎರಡು ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಸುರಿದ ಪರಿಣಾಮ ಬೆಂಗಳೂರಿನ ಹಲವೆಡೆ ಅಸ್ತವ್ಯಸ್ತತೆ ಉಂಟಾಯಿತು. ಹಲವೆಡೆಗಳಲ್ಲಿ ರಸ್ತೆಗಳ ಮಧ್ಯೆ ನೀರು ನಿಂತುಕೊಂಡ ಪರಿಣಾಮ ವಾಹನ ಸವಾರ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಕಚೇರಿ ಕೆಲಸ ಮುಗಿಯಿಸಿಕೊಂಡು ಮನೆಗಳತ್ತ ತೆರಳಲು ಮುಂದಾದ ಸಮಯದಲ್ಲಿ ಮಳೆ ಹಣಿಯಲು ಆರಂಭಿಸಿದ್ದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆ ಮಧ್ಯೆ ಸಿಲುಕಿಕೊಂಡು ಪರಿತಪಿಸುವಂತಾಯಿತು. ಮತ್ತೆ ಹಲವರು ಓಲಾ, ಊಬರ್‌ನಂಥ ಟ್ಯಾಕ್ಸಿಗಳಿಗೆ ಮೊರೆ ಹೋಗಬೇಕಾಯಿತು. ಬೆಂಗಳೂರಿನ ಬಾಣಸವಾಡಿಯ ಲಿಂಗರಾಜಪುರ ಮೇಲ್ಸೇತುವೆ ಕೆಳಗಿನ ಅಂಡರ್ ಪಾಸ್ ನಲ್ಲಿ ಮಳೆ ನೀರು ಶೇಖರಣೆಗೊಂಡ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡು ಕೆಲಹೊತ್ತು ವಾಹನಗಳು ನಿಂತಲ್ಲೇ ನಿಲ್ಲುವಂತಾಯಿತು. ಅಲ್ಲದೆ, ಲಿಂಗರಾಜಪುರ ಫ್ಲೈ ಒವರ್ ಮೇಲೆ ಟ್ರಾಫಿಕ್ ಜಾಮ್ ಆಯಿತು. ಹೆಣ್ಣೂರು ಕ್ರಾಸ್, ಹೆಬ್ಬಾಳ, ಕೋರಮಂಗಲ, ಶಾಂತಿನಗರ, ಜಯನಗರ, ವಿಜಯನಗರ, ರಾಜಾಜಿನಗರ, ವಿಧಾನಸೌಧ, ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನ ಹಲವೆಡೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಮನೆಗಳಲ್ಲಿ ಮಳೆ ನೀರು ನುಗ್ಗಿದುದರಿಂದ ಇಲ್ಲಿನ ಸ್ಲಂ ನಿವಾಸಿಗಳು ರಾತ್ರಿಯೆಲ್ಲ ಪರದಾಡುವಂತಾಯಿತು. ಇನ್ನು ಮಳೆಯ ಮುನ್ಸೂಚನೆಯನ್ನು ಅರಿತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಡರಾತ್ರಿಯೇ ಬಿಬಿಎಂಪಿ ಕೇಂದ್ರ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ಸ್ವತಃ ಬಿಬಿಎಂಪಿ ವಾರ್ ರೂಂನಲ್ಲಿ ಕುಳಿತು ಸಿಲಿಕಾನ್ ಸಿಟಿಯಲ್ಲಿ ಮಳೆಯ ಅವಾಂತರ ಉಂಟಾಗಿರುವ ಪ್ರದೇಶಗಳಲ್ಲಿ ತ್ವರಿತ ಗತಿಯಲ್ಲಿ ಪರಿಹಾರ ಕಾರ್ಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದುದು ಕಂಡು ಬಂತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಮಳೆಯಿಂದಾಗಿ ಹಲವೆಡೆ ತೊಂದರೆ ಉಂಟಾಗಿದೆ. ಜನರ ದೂರುಗಳನ್ನಾಧರಿಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಬಿಬಿಎಂಪಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಾನು ಸೂಚಿಸಿದ್ದೇನೆ. ಮಳೆಯ ಮುನ್ಸೂಚನೆ ಅರಿತು ನಾನೂ ಇಲ್ಲಿಗೆ ಬಂದು ಕುಳಿತಿರುವೆ ಎಂದರು.