ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮೆಟ್ರೋ ನಿರ್ಮಾಣ ಕಾರ್ಯದ ವೇಳೆ ಅಕ್ಟೋಬರ್ 29ರ ಸೋಮವಾರ ರಾತ್ರಿ ಸಂಭವಿಸಿದ ಭಾರಿ ಅಪಘಾತದಲ್ಲಿ ಓರ್ವ ಲೊಕೊ ಪೈಲಟ್ ಸೇರಿ ಮೂವರು ಸಾವನ್ನಪ್ಪಿದ್ದು, ಎಂಟು ಜನರು ಗಾಯಗೊಂಡಿದ್ದಾರೆ.
ಮೃತರಲ್ಲಿ ಮನೋಜ್, ವಿಜಯ್ ಮತ್ತು ಶ್ಯಾಂಬಾಬು ಎಂಬುವರು ಸೇರಿದ್ದಾರೆ. ಸತ್ತವರಲ್ಲಿ ಒಬ್ಬರು ಒರಿಸ್ಸಾದ ನಿವಾಸಿಯಾಗಿರುವ ಲೋಕೋ ಪೈಲಟ್. ಸುರಂಗದ ಬಳಿ ಲೊಕೊ ಯಂತ್ರವು ಬ್ರೇಕ್ ವೈಫಲ್ಯವನ್ನು ಅನುಭವಿಸಿದಾಗ ಹಲವಾರು ಕಾರ್ಮಿಕರು ಗಾಯಗೊಂಡಿದ್ದಾರೆ. ಇದರಿಂದಾಗಿ ಒಡಿಶಾದ ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಪಿರ್ಬಹೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಟ್ನಾ ವಿಶ್ವವಿದ್ಯಾಲಯದ ಬಳಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸುರಂಗದೊಳಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಲೊಕೊ ಯಂತ್ರವು ಅದರ ಬ್ರೇಕ್ ವಿಫಲವಾದಾಗ ನಿಯಂತ್ರಣವನ್ನು ಕಳೆದುಕೊಂಡಿತು. ಕಾರ್ಮಿಕರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.


































