ಟೆಲ್ ಅವಿವ್: ಹಮಾಸ್ ಉಗ್ರರಿಂದ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು ಮಿಯಾ ಶೆಮ್ ತಾನು ಅನುಭವಿಸಿದ ಮಾನಸಿಕ ಹಿಂಸೆ, ಒತ್ತಡದ ಭಯಾನಕ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ತನ್ನನ್ನು ಒತ್ತೆಯಾಗಿಟ್ಟುಕೊಂಡಿದ್ದ ಹಮಾಸ್ ಉಗ್ರನಿಗೆ ತನ್ನ ಮೇಲೆ ಅತ್ಯಾಚಾರ ನಡೆಸುವ ಆತುರವಿತ್ತು, ಆದರೆ ಹಾಗೆ ಮಾಡಲಿಲ್ಲ ಯಾಕೆ ಎಂಬುವುದನ್ನು ವಿವರಿಸಿದ್ದಾಳೆ.
ಮಿಯಾ ಸ್ಕೆಮ್ ಇಸ್ರೇಲಿ- ಫ್ರೆಂಚ್ ನಾಗರಿಕಳಾಗಿದ್ದು, ಆಕೆಯನ್ನು ಅಕ್ಟೋಬರ್ 7ರಂದು ನೋವಾ ಮ್ಯೂಸಿಕ್ ಫೆಸ್ಟಿವಲ್‌ನಿಂದ ಅಪಹರಿಸಲಾಗಿತ್ತು. ಆಕೆಯ ತೋಳಿಗೆ ಗುಂಡಿಟ್ಟ ಉಗ್ರರು ಆಕೆಯ ಕಾರನ್ನು ಸುಟ್ಟುಹಾಕಿದ್ದರು. ಗಾಜಾದ ಹಮಾಸ್ ಉಗ್ರನ ಮನೆಯಲ್ಲಿ ಆಕೆಯನ್ನು ಒತ್ತೆಯಾಳಾಗಿಟ್ಟಿದ್ದು, ಆಕೆ ಹೊರಗೆ ಕಾಣಿಸಿಕೊಳ್ಳುವಂತಿರಲಿಲ್ಲ. ಆತ ನಿರಂತರ ಆಕೆಯನ್ನು ಗಮನಿಸುತ್ತಿದ್ದ; ಕ್ರೂರವಾಗಿ ದಿಟ್ಟಿಸುತ್ತಿದ್ದ. ಆತನ ಹೆಂಡತಿ ಕೂಡ ಆಕೆಯನ್ನು ಕ್ರೂರವಾಗಿ ನಡೆಸಿಕೊಂಡಿದ್ದಳು ಎಂದು ಮಿಯಾ ವಿವರಿಸಿದ್ದಾಳೆ.
ಗಾಜಾದ ನಾಗರಿಕ ಬಡಾವಣೆಯಲ್ಲಿಯೇ ಆಕೆಯನ್ನು ಇಡಲಾಗಿತ್ತು. ಈ ಕುಟುಂಬ ಕೂಡ ಹಮಾಸ್ ಉಗ್ರರ ಜೊತೆಗೆ ಶಾಮೀಲಾಗಿತ್ತು. ʼʼನಾನೇಕೆ ಫ್ಯಾಮಿಲಿಯ ಜೊತೆಗೆ ಇದ್ದೇನೆ ಎಂಬುದು ನನಗೆ ಮೊದಲು ಆಶ್ಚರ್ಯ ಉಂಟುಮಾಡಿತ್ತು. ನಂತರ ಅವರೂ ಹಮಾಸ್ ಜೊತೆಗೆ ಶಾಮೀಲಾಗಿರುವುದು ತಿಳಿಯಿತು. ಅಲ್ಲಿರುವ ಎಲ್ಲರೂ ಭಯೋತ್ಪಾದಕರೇ, ಬೇರೇನಿಲ್ಲ” ಎಂದು ಮಿಯಾ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ.