ನವದೆಹಲಿ : ಬಾಹ್ಯಾಕಾಶಕ್ಕೆ ತೆರಳಿರುವ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಸ್ವತಃ ಸುನಿತಾ ವಿಲಿಯಮ್ಸ್ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚಿನ ಫೋಟೋಗಳ ಆಧಾರದ ಮೇಲೆ ಸುನೀತಾ ವಿಲಿಯಮ್ಸ್ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದೇ ರೀತಿಯಲ್ಲಿ ಅವರ ಫೋಟೋ ಕೂಡ ಬಿತ್ತರವಾಗಿದ್ದವು. ಈ ಬಗ್ಗೆ ವೀಡಿಯೋ ಸಂದರ್ಶನವೊಂದಕ್ಕೆ ಪ್ರತಿಕ್ರಿಯಿಸಿ ಬಾಹ್ಯಾಕಾಶ ನಿಲ್ದಾಣದಿಂದಲೇ ಮಾತನಾಡಿರುವ ಅವರು, ತಮ್ಮ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುವುದಾಗಿ ತಿಳಿಸಿದ್ದಾರೆ.
ನಾನು ಬಾಹ್ಯಾಕಾಶ ನಿಲ್ದಾಣಕ್ಕೆ ಬರುವಾಗ ಇದ್ದ ತೂಕವನ್ನೇ ಈಗಲೂ ಹೊಂದಿದ್ದೇನೆ. ಸ್ನಾಯು ಮತ್ತು ಮೂಳೆ ಸಾಂದ್ರತೆಯ ಮೇಲೆ ಮೈಕ್ರೊಗ್ರಾವಿಟಿಯ ಪರಿಣಾಮಗಳನ್ನು ಎದುರಿಸಲು ಗಗನಯಾತ್ರಿಗಳು ಅನುಸರಿಸುವ ಕಠಿಣ ವ್ಯಾಯಾಮದ ಕಟ್ಟುಪಾಡುಗಳಿಂದಾಗಿ ದೈಹಿಕ ರೂಪ ಬದಲಾಗಿದೆ. ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಎಂದು ಸುನಿತಾ ಹೇಳಿದ್ದಾರೆ.