ಭೋಪಾಲ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ವಿಶೇಷ ಮದುವೆ ಕಾಯ್ದೆ ಅಡಿಯಲ್ಲಿ ತೃತೀಯಲಿಂಗಿಯೊಬ್ಬರು ತನ್ನ ಬಹುಕಾಲದ ಗೆಳತಿಯನ್ನು ಕಾನೂನುಬದ್ಧವಾಗಿ ಮದುವೆಯಾದ ಘಟನೆಯೊಂದು ನಡೆದಿದೆ.
ಅಸ್ತಿತ್ವ ಸೋನಿ ಪುರುಷನಾಗಿ ಬದಲಾಗುವ ಮುನ್ನ ಅಲ್ಕಾ ಸೋನಿ ಎಂದು ಕರೆಯಲಾಗುತ್ತಿತ್ತು. ಅಸ್ಥಾ ಎಂಬಾಕೆಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಈ ಮದುವೆಗೆ ಎರಡೂ ಕುಟುಂಬದ ಸದಸ್ಯರು ಒಪ್ಪಿದ್ದಾರೆ.
ಭಿನ್ನಲಿಂಗೀಯ ಸಂಬಂಧದಲ್ಲಿರುವ ತೃತೀಯಲಿಂಗಿಗಳು, ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಈ ಅಭೂತಪೂರ್ವ ವಿವಾಹವು ಡಿಸೆಂಬರ್ 11ರಂದು ತಮ್ಮ ಸಂಪ್ರದಾಯದ ಪ್ರಕಾರ ನಡೆಯಲಿದೆ.
ತಮ್ಮ ಮದುವೆಗೂ ಮುನ್ನ ದಂಪತಿ, ಇಂದೋರ್ ಜಿಲ್ಲಾಧಿಕಾರಿ ರೋಶನ್ ರೈ ಅವರಿಗೆ ಅರ್ಜಿ ಸಲ್ಲಿಸಿ, ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದರು. ಜಿಲ್ಲಾಧಿಕಾರಿಗಳ ಪರಿಶೀಲನೆಯ ಬಳಿಕ ಇಬ್ಬರ ಅರ್ಜಿಯನ್ನು ಸ್ವೀಕರಿಸಿ, ಎರಡೂ ಕುಟುಂಬದವರಿಗೆ ಮಾಹಿತಿ ನೀಡಲಾಯಿತು. ಗುರುವಾರ ಆಸ್ತಿತ್ವ ಮತ್ತು ಅಸ್ತಾ ಕುಟುಂಬಗಳು ನ್ಯಾಯಾಲಯಕ್ಕೆ ಹಾಜರಾದವು. ಜಂಟಿ ಸಾಕ್ಷಿಗಳ ಸಮ್ಮುಖದಲ್ಲಿ ನವದಂಪತಿ ತಮ್ಮ ವಿವಾಹ ಪ್ರಮಾಣಪತ್ರವನ್ನು ಪಡೆದಿದ್ದು ಈಗ ವಿವಾಹವಾಗಲು ನಿರ್ಧರಿಸಿದ್ದಾರೆ.