ತಮಿಳುನಾಡು: ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮಹಿಳೆಯರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರಿಗೆ ಗಾಯಗಳಾಗಿವೆ.
ಶನಿವಾರ ಮುಂಜಾನೆ ಸಂಭವಿಸಿದ ಸ್ಫೋಟದ ಪರಿಣಾಮ ಸಮೀಪದ ಹೋಟೆಲ್ ಕಟ್ಟಡ ಕುಸಿದು ಉಳಿದ ನಾಲ್ಕು ಕಟ್ಟಡಗಳು ಭಾಗಶಃ ಹಾನಿಯಾಗಿದ್ದು, ಹಲವರು ಸಿಲುಕಿಕೊಂಡಿದ್ದಾರೆ. ಜಿಲ್ಲೆಯ ಪಜಯಪೆಟ್ಟೈನಲ್ಲಿರುವ ಪಟಾಕಿ ತಯಾರಿಕಾ ಗೋದಾಮಿನಲ್ಲಿ ಸಂಭವಿಸಿದ ಹಠಾತ್ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 12 ಮಂದಿಯನ್ನು ಇದುವರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಬೆಂಕಿಯನ್ನು ನಂದಿಸಲು ಮತ್ತು ಒಳಗೆ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ. ಸ್ಫೋಟದ ಪರಿಣಾಮದಿಂದ ಹೋಟೆಲ್ ಕಟ್ಟಡ ಸಂಪೂರ್ಣ ಕುಸಿದಿದ್ದು, ಸಮೀಪದ ಮೂರು-ನಾಲ್ಕು ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವ ಒಟ್ಟು ಜನರ ಸಂಖ್ಯೆಯನ್ನು ರಕ್ಷಣಾ ಸಿಬ್ಬಂದಿಗೆ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ, ಸ್ಫೋಟದ ಕಾರಣವನ್ನು ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ.