ಬೆಂಗಳೂರು : ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಕ್ರೀಡಾ ಸಚಿವ ಉದಯನಿಧಿ ಸ್ಟ್ಯಾಲಿನ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪರಮೇಶ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಉದಯನಿಧಿ ಸ್ಟ್ಯಾಲಿನ್‌ಗೆ ಪ್ರಕರಣದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಹಾಗೂ ವಿಚಾರಣೆಯನ್ನ ಮುಂದೂಡುವಂತೆ ವಕೀಲರು ಸಲ್ಲಿಸಿದ್ದ ಮನವಿಯನ್ನ ಪರಿಗಣಿಸಿದ ನ್ಯಾಯಾಲಯ, ಆಗಸ್ಟ್ 8ಕ್ಕೆ ವಿಚಾರಣೆಯನ್ನ ಮುಂದೂಡಿದೆ. ಉದಯನಿಧಿ ಸ್ಟ್ಯಾಲಿನ್‌ಗೆ 1 ಲಕ್ಷ ಬಾಂಡ್ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಹಿನ್ನೆಲೆ ಕಳೆದ ವರ್ಷ ಸೆಪ್ಟೆಂಬರ್ 4ರಂದು ಚೆನ್ನೈನ ತೇನಂಪೇಟೆಯಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಉದಯನಿಧಿ ಸ್ಟ್ಯಾಲಿನ್, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಹಾಗೂ ಕೊರೊನಾ ಇದ್ದಂತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿರುವ ಸನಾತನ ಧರ್ಮವನ್ನ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಉದಯನಿಧಿ ಹೇಳಿಕೆಯನ್ನ ಖಂಡಿಸಿದ್ದ ಅನೇಕ ಹಿಂದೂ ಮುಖಂಡರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.