ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಿರಿಯ ನಟ ಆರ್.ಎಸ್ ಶಿವಾಜಿ ಅವರು ನಿಧನರಾಗಿದ್ದಾರೆ. ಸಾಕಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ 66ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ನಟ-ನಟಿಯರು, ಆಪ್ತರು ಸಂತಾಪ ಸೂಚಿಸಿದ್ದಾರೆ.
ಸಾಕಷ್ಟು ಕಾಲದಿಂದ ಶಿವಾಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಚಿಕಿತ್ಸೆ ಫಲಿಸದೇ ಸೆಪ್ಟೆಂಬರ್ 2ರಂದು ನಿಧನರಾಗಿದ್ದಾರೆ. ತೆಲುಗು- ತಮಿಳಿನಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಆರ್.ಎಸ್ ಶಿವಾಜಿ ಅವರು ಕಮಲ್ ಹಾಸನ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು. ಕಮಲ್ ಹಾಸನ್‌ಗೆ ಶಿವಾಜಿ ಅವರು ಆಪ್ತರಾಗಿದ್ದರು. ನಟ ಶಿವಾಜಿ ಕಡೆಯದಾಗಿ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿನ ಶಿವಾಜಿ ನಟನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.