ದೆಹಲಿ: ಆಮ್ ಆದ್ಮಿ ಪಕ್ಷದೊಂದಿಗಿನ ಮೈತ್ರಿಯನ್ನು ವಿರೋಧಿಸಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದ ಅವರು, ‘ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸುವ ಏಕೈಕ ಆಧಾರದ ಮೇಲೆ ರಚಿಸಲಾದ ಪಕ್ಷದೊಂದಿಗಿನ ಮೈತ್ರಿಗೆ ದೆಹಲಿ ಕಾಂಗ್ರೆಸ್ ಘಟಕವು ವಿರುದ್ಧವಾಗಿತ್ತು. ಇದರ ಹೊರತಾಗಿಯೂ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಯಿತು ಎಂದು ಉಲ್ಲೇಖಿಸಿದ್ದಾರೆ.
ದೆಹಲಿ ಕಾಂಗ್ರೆಸ್‌ನ ಶಿಸ್ತು ಸಮಿತಿ ಸಭೆಯ ಬಳಿಕ ದೆಹಲಿಯ ಮಾಜಿ ಸಚಿವ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯ ರಾಜ್‌ಕುಮಾರ್ ಚೌಹಾಣ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಕೆಲ ದಿನಗಳ ನಂತರ ಅರವಿಂದರ್ ಸಿಂಗ್ ಲವ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.