ಉತ್ತರಾಖಂಡ: ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಸಂಕಷ್ಟಕ್ಕೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಗುರುವಾರ ರಾತ್ರಿ ಹೊತ್ತಿಗೆ ಪೂರ್ಣಗೊಂಡು, ಕಾರ್ಮಿಕರು ಹೊರಗೆ ಬರಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಮತ್ತೆ ವಿಘ್ನ ಎದುರಾಗಿದ್ದು, ಡ್ರಿಲಿಂಗ್ ಕಾರ್ಯಾಚರಣೆಯನ್ನು ಗುರುವಾರ ರಾತ್ರಿ ಸ್ಥಗಿತಗೊಳಿಸಲಾಗಿದೆ.
ಕಾರ್ಯಾಚರಣೆ 12ನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರು ಯಾವುದೇ ತೊಂದರೆ ಇಲ್ಲದೆ ಬರಲಿ ಎಂದು ದೇಶದ ಜನ ಪ್ರಾರ್ಥಿಸುತ್ತಿದ್ದು, ರಕ್ಷಣೆಗೆ ಹರಸಾಹಸ ಮುಂದುವರಿದಿದೆ. ಸಿಲುಕಿರುವ ಕಾರ್ಮಿಕರನ್ನು ಹೊರ ತರುಲು ಇನ್ನೂ ಕೆಲವೇ ಮೀಟರ್ ಗಳಷ್ಟು ದೂರವಿದ್ದೇವೆ. ಸಿಲುಕಿರುವ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ದಾರಿ ಮಾಡಿಕೊಡುತ್ತಿದ್ದ ಆಗರ್ ಡ್ರಿಲಿಂಗ್ ಮಷಿನ್ ಕೆಟ್ಟು ನಿಂತಿದ್ದರಿಂದ ಅನಿವಾರ್ಯವಾಗಿ ಗುರುವಾರ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು. ಆಗರ್ ಡ್ರಿಲಿಂಗ್ ಯಂತ್ರವನ್ನು ರಿಪೇರಿ ಮಾಡಲಾಗುತ್ತಿದ್ದು, ಇಂದು ಮತ್ತೆ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಅಂತಾರಾಷ್ಟ್ರೀಯ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಹೇಳಿದ್ದಾರೆ.
ರಕ್ಷಣಾ ಸಿಬ್ಬಂದಿ ಇಲ್ಲಿವರೆಗೆ 46.8 ಮೀ. ಆಳದವರೆಗೆ ಕೊರೆದಿದ್ದಾರೆ. ಕೊರೆಯುವ ವೇಳೆ ಮಿಷನ್ಗೆ ಏನಾದರೂ ಬಲಿಷ್ಠವಾದ ವಸ್ತುಗಳು ಅಡ್ಡ ಬರುತ್ತಿರುವುದರಿಂದ ಕೆಲಸಕ್ಕೆ ಅಡಚಣೆಯಾಗುತ್ತಿದೆ. ಸದ್ಯ ಇದೀಗ ಮಷಿನ್ ಕೆಟ್ಟ ಹಿನ್ನೆಲೆಯಲ್ಲಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.