ತಾಲ್ಲೂಕು ಪಂಚಾಯಿತಿ ಸಭೆ: ಕೃಷಿ ಹೊಂಡ, ಬದು ನಿರ್ಮಾಣ, ಹಸುಗಳ ವಿತರಣೆಯಲ್ಲಿ ಅಕ್ರಮ: ಶಾಸಕ ಕೆ.ಸಿ.ವೀರೇಂದ್ರಪಪ್ಪಿ

 

ಚಿತ್ರದುರ್ಗ : ಕೃಷಿ ಹೊಂಡ, ಬದು ನಿರ್ಮಾಣ, ಹಸುಗಳ ವಿತರಣೆಯಲ್ಲಿ ಅಕ್ರಮವಾಗಿರುವ ಅನುಮಾನ ಬರುತ್ತಿದೆ. ಸರ್ಕಾರದ ಹಣ ಮಧ್ಯವರ್ತಿಗಳ ಪಾಲಾಗಬಾರದು. ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ಎಲ್ಲಿ ಲೋಪವಾಗಿದೆ ಎನ್ನುವುದನ್ನು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ 2024-25 ನೇ ಸಾಲಿನ ಎರಡನೆ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಶಾಸಕರು ದ್ಯಾಮವ್ವನಹಳ್ಳಿ ಪಂಚಾಯಿತಿಯಲ್ಲಿ ಹಸುಗಳ ವಿತರಣೆಯಲ್ಲಿ ಗೋಲ್ಮಾಲ್ ಆಗಿದೆ. ಎಲ್ಲೆಲ್ಲಿ ಏನೇನು ಕಾಮಗಾರಿಗಳು ಆಗಿವೆ. ಎಲ್ಲಿ ಇನ್ನು ಆರಂಭಗೊಂಡಿಲ್ಲ. ವಿಳಂಭವಾಗಲು ಏನು ಕಾರಣ ಎನ್ನುವುದು ಪರಿಶೀಲಿಸಿ ಮುಂದಿನ ಸಭೆಯ ವೇಳೆಗೆ ವರದಿ ಕೊಡಬೇಕು. ನಿರ್ಲಕ್ಷೆ ವಹಿಸುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಸೂಚಿಸಿದರು.

Advertisement

ಒಂದು ಚೀಲ ಶೇಂಗಾ ಬೀಜವನ್ನು ಮೂವರು ರೈತರಿಗೆ ವಿತರಣೆ ಮಾಡುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿವೆ. ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಆಪಾದನೆಗಳಿವೆ. ಮತ್ತೆ ಇಂತಹ ತಪ್ಪುಗಳು ಮರುಕಳಿಸಬಾರದು. ರೈತರ ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.

573 ಕೃಷಿ ಹೊಂಡ ಹಾಗೂ ಬದು ನಿರ್ಮಾಣ ಗುರಿಯಲ್ಲಿ 243 ಪೂರ್ಣಗೊಂಡಿದೆ. ಉಳಿದವು ಏಕೆ ಆಗಿಲ್ಲ. ರೈಲು ಹಳಿಗೆ ರೈತರ ಎಷ್ಟು ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಪರಿಶೀಲಿಸಿ ವರದಿ ಕೊಡಿ. ಈಗ ನೀಡಿರುವ ವರದಿ ಸರಿಯಿಲ್ಲ. ನಮ್ಮನ್ನು ಸಮಾಧಾನ ಪಡಿಸಲು ಮನಬಂದಂತೆ ಸಭೆಗೆ ವರದಿ ಕೊಡುವುದು ಬೇಡ. ಸಭೆಗೆ ತಪ್ಪು ಮಾಹಿತಿ ಬೇಕಾಗಿಲ್ಲ. ನೈಜ ಸ್ಥಿತಿಯನ್ನು ತಿಳಿಸಿ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ತಾಲ್ಲೂಕಿನಾದ್ಯಂತ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಶುದ್ದ ಕುಡಿಯುವ ನೀರಿನ ಘಟಕಗಳಿವೆ ಎಂದು ಶಾಸಕರು ಪ್ರಶ್ನಿಸಿದಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಇಂಜಿನಿಯರ್ ಉತ್ತರಿಸುತ್ತ 106 ಶುದ್ದ ಘಟಕದಲ್ಲಿ 81 ಮಾತ್ರ ಸುಸ್ಥಿತಿಯಲ್ಲಿದೆ ಎಂದು ಮಾಹಿತಿ ನೀಡಿದಾಗ ಉಳಿದವು ಕೆಟ್ಟಿದ್ದರೂ ಏಕೆ ಇದುವರೆವಿಗೂ ರಿಪೇರಿ ಮಾಡಿಸಿಲ್ಲ. ಎಲ್ಲೆಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ ಎನ್ನುವುದನ್ನು ಪರಿಶೀಲಿಸುವುದಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಡಿ ಎಂದು ಕೆ.ಡಿ.ಪಿ.ಸದಸ್ಯರುಗಳಿಗೆ ಶಾಸಕರು ತಿಳಿಸಿದರು.

ಗ್ರಾಮೀಣ ಭಾಗಗಳಲ್ಲಿ ಎಲ್ಲಿಯೂ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು. ಪ್ರತಿ ಪಂಚಾಯಿತಿ ಪಿ.ಡಿ.ಓ.ಗಳು ಶುದ್ದ ಕುಡಿಯುವ ನೀರಿನ ಘಟಕಗಳ ಕಾಮಗಾರಿ ನಡೆಯುವಾಗ ಪೈಪ್ಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಪ್ರತಿ ಸಭೆಯಲ್ಲಿಯೂ ನನಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ಕೊಡುತ್ತಿಲ್ಲ. ಮುಂದಿನ ಸಭೆಯಲ್ಲಿ ಇಂತಹ ತಪ್ಪು ಮರುಕಳಿಸಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಗರಂ ಆದರು.

ಸೊಂಡೆಕೊಳ ಗ್ರಾಮದಲ್ಲಿ ಶಾಲೆಯೊಂದರ ಕಿಟಕಿ ಬಾಗಿಲುಗಳನ್ನು ಮುರಿದಿರುವುದಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್.ದಾಖಲಾಗಿದೆ. ಮಕ್ಕಳಿಗೆ ಶೌಚಾಲಯವಿಲ್ಲ ಎಂದು ಕೆಡಿಪಿ. ನಾಮ ನಿರ್ದೇಶಕ ಸದಸ್ಯ ನಾಗರಾಜ್ ಸಭೆಯ ಗಮನಕ್ಕೆ ತಂದಾಗ ಎಲ್ಲಿ ಪೊಲೀಸರು ಒಬ್ಬರು ಸಭೆಗೆ ಬಂದಿಲ್ಲ ಎಂದು ಹುಡುಕಾಡಿದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಚಿತ್ರದುರ್ಗ ಡಿ.ವೈ.ಎಸ್ಪಿ.ಗೆ ನೋಟಿಸ್ ನೀಡಿ ದಾವಣಗೆರೆ ಪೂರ್ವ ವಲಯದ ಐ.ಜಿ.ಪಿ. ಹಾಗೂ ಗೃಹ ಮಂತ್ರಿಗಳ ಗಮನಕ್ಕೂ ತನ್ನಿ ಎಂದು ಸೂಚಿಸಿ ಮೊಬೈಲ್ ಮೂಲಕ ಪೊಲೀಸ್ ಅಧಿಕಾರಗಳನ್ನು ತರಾಟೆ ತೆಗೆದುಕೊಂಡಾಗ ನಗರ ಠಾಣೆ ಇನ್ಸ್ಪೆಕ್ಟರ್ ಹಾಗೂ ಸಂಚಾರಿ ಠಾಣೆ ಅಧಿಕಾರಿಗಳು ಆತುರಾತುರದಲ್ಲಿ ಸಭೆಗೆ ದೌಡಾಯಿಸಿ ತಡವಾಗಿದ್ದಕ್ಕೆ ಸಮಜಾಯಿಷಿ ನೀಡಿದರು.

ರೇಷ್ಮೆ ಬೆಳೆಯುವ ರೈತರಿಗೆ ಮನೆಗೆಳನ್ನು ಮಂಜೂರು ಮಾಡಬೇಕಾದರೆ ನನ್ನ ಗಮನಕ್ಕೆ ತರಬೇಕು. ನೀವುಗಳೇ ನಿರ್ಧಾರ ತೆಗೆದುಕೊಂಡರೆ ಸಹಿಸುವುದಿಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ನನಗೆ ತಿಳಿಸದೆ ಮನೆಗಳನ್ನು ನೀಡಬಾರದೆಂದು ರೇಷ್ಮೆ ಇಲಾಖೆ ಅಧಿಕಾರಿಗೆ ತರಾಟೆ ತೆಗೆದುಕೊಂಡರು. ಮಲ್ಲಾಪುರ, ಅನ್ನೇಹಾಳ್, ಸೊಂಡೆಕೊಳ, ಭೀಮಸಮುದ್ರ, ಮೇಗಳಹಳ್ಳಿಯಲ್ಲಿ ಅಡುಗೆ ಕೋಣೆಗಳು ಸರಿಯಿಲ್ಲ. ಮಲ್ಲನಕಟ್ಟೆಯಲ್ಲಿ ಶಾಲೆ ಅರ್ಧಕ್ಕೆ ನಿಂತಿದೆ. ಮಕ್ಕಳಿಗೆ ಏನಾದರೂ ಅನಾಹುತವಾದರೆ ಯಾರು ಹೊಣೆ? ಅಡುಗೆ ಕೋಣೆಗಳ ಕಾಮಗಾರಿ ಬೇಗ ಮುಗಿಸಬೇಕೆಂದರು.

ಹತ್ತನೆ ತರಗತಿ ಫಲಿತಾಂಶ ಕಳಪೆಯಾಗಿರುವುದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಸುಧಾರಣೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ರವರನ್ನು ಪ್ರಶ್ನಿಸಿದಾಗ ಸೆ.1 ರಿಂದ ಬೆಳಿಗ್ಗೆ 9 ಕ್ಕೆ ಎಲ್ಲಾ ಶಾಲೆಗಳು ಆರಂಭಗೊಳ್ಳುತ್ತವೆ. ಫಲಿತಾಂಶ ಸುಧಾರಣಗೆ ಇಲಾಖೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ನುರಿತ ಶಿಕ್ಷಕರುಗಳಿಂದ ಮಕ್ಕಳಿಗೆ ಪಾಠಗಳನ್ನು ಬೋಧಿಸಲಾಗುತ್ತಿದೆ ಎಂದು ಉತ್ತರಿಸಿದರು.

ಶಾಲೆ ಬಿಟ್ಟ 123 ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ದಾಖಲಿಸಿಕೊಳ್ಳಲಾಗಿದೆ. ಹೊರಗಿರುವ ಒಂಬತ್ತು ಮಕ್ಕಳು ಪೋಷಕರುಗಳೊಂದಿಗೆ ಬೇರೆ ಊರುಗಳಿಗೆ ಗುಳೆ ಹೋಗಿದ್ದಾರೆ. ಅಂತಹವರನ್ನು ಹುಡುಕಿ ಶಾಲೆಗಳಿಗೆ ದಾಖಲಿಸುವಂತೆ ಬೇರೆ ಜಿಲ್ಲೆಗಳಲ್ಲಿನ ಶಿಕ್ಷಣಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

ಎಲ್ಲೆಲ್ಲಿ ಅಂಗನವಾಡಿ ಕೇಂದ್ರಗಳು ದುಸ್ಥಿತಿಯಲ್ಲಿವೆಯೋ ಅಂತಹುಗಳನ್ನು ಬೇಗನೆ ರಿಪೇರಿ ಮಾಡಿಸಿ. ಕೆಲವು ಕಡೆ ಜಾಗವಿದ್ದರು ಇನ್ನು ಏಕೆ ಕಟ್ಟಡಗಳನ್ನು ಆರಂಭಿಸಿಲ್ಲ. ಮುಂದಿನ ಸಭೆಯ ವೇಳೆಗೆ ಎಲ್ಲಾ ಕಟ್ಟಡಗಳನ್ನು ಪೂರ್ಣಗೊಳಿಸಿ ವರದಿ ತರಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಗಡುವು ನೀಡಿದರು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಿ.ಆನಂದ್, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ತಹಶೀಲ್ದಾರ್ ನಾಗವೇಣಿ ಸಭೆಯ ವೇದಿಕೆಯಲ್ಲಿದ್ದರು.

ಕೆಡಿಪಿ.ಸದಸ್ಯರುಗಳಾದ ಆನಂದ್, ಸಂತೋಷ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತ್ರೈಮಾಸಿಕ ಸಭೆಯಲ್ಲಿ ಹಾಜರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement