ಬೆಂಗಳೂರು : ತಿಂಡಿ, ಊಟದ ವ್ಯವಸ್ಥೆ ಬಳಿಕ ಇದೀಗ ವಿಶ್ರಾಂತಿಗೂ ವ್ಯವಸ್ಥೆ ಮಾಡಲಾಗಿದೆ. ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ಸ್ಪೀಕರ್ ಯು.ಟಿ ಖಾದರ್ ಅವರು ವಿಶಿಷ್ಟ ಪ್ರಯತ್ನವೊಂದನ್ನು ಕೈಗೊಂಡಿದ್ದಾರೆ. ಮಧ್ಯಾಹ್ನ ಊಟದ ಬಳಿಕ ಶಾಸಕರು ವಿಶ್ರಾಂತಿ ಪಡೆಯಲು ಲಾಂಜ್ ನಲ್ಲಿ ಸುಖಾಸನಗಳನ್ನು ಹಾಕಿಸಲಾಗಿದೆ ಎಂದು ಇಂದು ಕಲಾಪದಲ್ಲಿ ಸ್ಪೀಕರ್ ತಿಳಿಸಿದ್ದಾರೆ.
ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಲೇ ಸ್ಪೀಕರ್ ಈ ವಿಚಾರವನ್ನು ಘೋಷಣೆ ಮಾಡಿದರು. ಶಾಸಕರು ಬೆಳಗ್ಗೆ ಬೇಗ ಬರಲಿ ಅನ್ನುವ ಉದ್ದೇಶದಿಂದ ಬೆಳಗ್ಗೆ ತಿಂಡಿಯ ವ್ಯವಸ್ಥೆ ಮಾಡಿಸಿದೆ. ನಂತರ ಮಧ್ಯಾಹ್ನ ಊಟಕ್ಕಾಗಿ ದೂರ ಹೋಗಿ ಬರುವುದಕ್ಕೆ ತಡವಾಗುತ್ತದೆ ಎಂಬ ಕಾರಣಕ್ಕಾಗಿ ಉತ್ತಮವಾದ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಈಗ ಕೆಲ ಶಾಸಕರು ಊಟ ಮಾಡಿ ಮಲಗಲು ಶಾಸಕರ ಭವನಕ್ಕೆ ಹೋಗಿ ನಿದ್ದೆ ಮಾಡಿ ಬರುತ್ತೇವೆ ಎಂದು ಹೇಳಿ ಹೋಗುತ್ತಿದ್ದಾರೆ. ಬಳಿಕ ಕೆಲವರು ಬರುವುದೇ ಇಲ್ಲ. ಹಾಗಾಗಿ ಇದನ್ನು ತಡೆಯಲು ಇಲ್ಲೇ ಸುಖಾಸನಗಳನ್ನು ಹಾಕಿಸಿದ್ದೇನೆ. ನಿದ್ರೆ ಬಂದರೆ ಇಲ್ಲೇ ಮಲಗಿ, ದೂರ ಹೋಗಬೇಡಿ. ನಿಮ್ಮ ಬಿದ್ದರೆ ಕೂಡಲೇ ಕರೆಸಿಕೊಳ್ಳುತ್ತೇವೆ ಎಂದು ಹಾಜರಾತಿ ಹೆಚ್ಚಿಸಲು ತಾವು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಸದ್ಯ ಪೈಲಟ್ ಪ್ರಾಜೆಕ್ಟ್ ಆಗಿ ಇದನ್ನು ಅಳವಡಿಸಿದ್ದೇವೆ. ಪರಿಣಾಮ ನೋಡಿಕೊಂಡು ನಿಮ್ಮ ಅಭಿಪ್ರಾಯ ತಿಳಿಸಿ. ಸಕಾರಾತ್ಮಕ ಅಭಿಪ್ರಾಯ ಬಂದರೆ ಮುಂದಿನ ಅಧಿವೇಶನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುತ್ತೇವೆ. ಲಾಂಜ್‌ನಲ್ಲಿ ಶಿಸ್ತು ಕಾಪಾಡಿ. ಶಾಸಕರು ಪಿಎಗಳನ್ನು ಮತ್ತಿತರರನ್ನು ಕರೆದುಕೊಂಡು ಲಾಂಜ್‌ಗೆ ನುಗ್ಗಬೇಡಿ. ಶಾಸಕರು ಕೂರಲು ಜಾಗ ಇರಲ್ಲ. ಈ ವಿಚಾರದಲ್ಲಿ ಶಾಸಕರು ಮಾರ್ಷಲ್‌ಗಳ ಜೊತೆ ವಾಗ್ವಾದ ಮಾಡಬೇಡಿ. ಇದರಿಂದ ನಿಮ್ಮ ಘನತೆ ಹೆಚ್ಚುವುದಿಲ್ಲ. ಅವರು ನಮ್ಮ ಆದೇಶ ಪಾಲಿಸುತ್ತಾರೆ ಅಷ್ಟೇ ಎಂದು ಅವರು ಸೂಚನೆ ನೀಡಿದ್ದಾರೆ.