ಆಟಿ ಅಮಾವಾಸ್ಯೆಯ ದಿನ ಕುಡಿಯುವ ಕಷಾಯವನ್ನು ಸಪ್ತಪರ್ಣಿ ಮರದ ತೊಗಟೆಯಿಂದ ತಯಾರಿಸಲಾಗುತ್ತದೆ. ಇದನ್ನು ಕರಾವಳಿ ಭಾಗದಲ್ಲಿ ಪಾಲೆಮರದ ಕಷಾಯ ಎಂದೂ ಕರೆಯುತ್ತಾರೆ. ಬಹಳ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಈ ಆಚರಣೆಯು ಆರೋಗ್ಯದ ದೃಷ್ಠಿಯಿಂದ ಬಹಳ ಒಳ್ಳೆಯದು. ಈ ಕಷಾಯವು ಸಾಕಷ್ಟು ಆಯುರ್ವೇದಿಕ್ ಗುಣಗಳನ್ನು ಹೊಂದಿದ್ದು. ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಈಗ ಮಳೆಗಾಲ, ಕರಾವಳಿಯ ಜಡಿಮಳೆಗೆ ನಾನಾ ಬಗೆಯ ಸೋಂಕುಗಳು ಬಾಧಿಸುವ ಅಪಾಯ ಹೆಚ್ಚು. ಇದನ್ನು ಮನಗಂಡ ನಮ್ಮ ಪೂರ್ವಿಕರು ವಿಶಿಷ್ಟ ಆಚರಣೆಯೊಂದನ್ನು ಚಾಲ್ತಿಗೆ ತಂದಿದ್ದರು. ಆಷಾಢ ಅಮವಾಸ್ಯೆಯಲ್ಲಿ ಕಹಿ ಕುಡಿಯುವ ಪದ್ಧತಿಯೊಂದು ಇಂದಿಗೂ ಚಾಲ್ತಿಯಲ್ಲಿದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಈ ಆಟಿ ಅಮಾವಾಸ್ಯೆಯ ಆಚರಣೆ ಕಂಡುಬರುತ್ತದೆ. ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ಹೋಗಿ ಸರ್ಪಪರ್ಣೀ ಮರದ ತೊಗಟೆಯನ್ನು ಕೆತ್ತಿ ತರಬೇಕು. ಅದೂ ಕೂಡಾ ಪುರುಷರೇ ಹೋಗಿ ತರುವುದು ವಾಡಿಕೆ. ಈ ಕಷಾಯಕ್ಕೆ ಅದರದ್ದೆ ಆದ ಮಹತ್ವವಿದೆ. ಆಟಿ ಅಮವಾಸ್ಯೆ ದಿನ ಈ ಕಷಾಯವನ್ನು ಕುಡಿದರೆ ಸರ್ವ ರೋಗದಿಂದಲೂ ದೂರವಿದ್ದಂತೆ ಎನ್ನಲಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ತಂದ ಪಾಲೆಮರದ ಕೆತ್ತೆಯನ್ನು ಚೆನ್ನಾಗಿ ತೊಳೆದು, ಅದರ ಹೊರಕವಚವನ್ನು ಕೆರೆದು ತೆಗೆಯುತ್ತಾರೆ. ನಂತರ ಅದನ್ನು ಜಜ್ಜಿ ಅದರ ಹಾಲನ್ನು ತೆಗೆಯಲಾಗುತ್ತದೆ. ನಂತರ ಅದಕ್ಕೆ ಕರಿ ಮೆಣಸು, ಬೆಳ್ಳುಳ್ಳಿ, ಓಮ ಕಾಳು ಸೇರಿಸಿ, ಚೆನ್ನಾಗಿ ಅರೆದು ಸೋಸಬೇಕು. ಕಹಿಯಾಗಿರುವ ಆಟಿಯ ಈ ಕಷಾಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಪಾಲೆ ಕೆತ್ತೆಯ ಕಷಾಯ ಉಷ್ಣ ಕಾರಕ, ಹಾಗಾಗಿ ದೇಹ ತಂಪಾಗಿಡಲು ಕಷಾಯ ಕುಡಿದ ಬಳಿಕ ಮೆಂತ್ಯೆಯ ಸಿಹಿ ಗಂಜಿ ಸೇವೆಸಬೇಕು, ಇದರಿಂದ ನಾಲಿಗೆಗೂ ರುಚಿ, ದೇಹಕ್ಕೂ ಸೌಖ್ಯ. ಆಯುರ್ವೇದದಲ್ಲಿ, ಸಪ್ತಪರ್ಣೀ ಮರದ ಕಷಾಯವನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮೂಲಿಕೆಯಾಗಿ ಬಳಸಲಾಗುತ್ತದೆ. ಇದು ಹೊಟ್ಟೆಯ ಕಾಯಿಲೆಗಳು ಮತ್ತು ಹುಳುವಿನ ಸಮಸ್ಯೆಯನ್ನು ದೂರವಿಡಲು ಉತ್ತಮ ಔಷಧಿ ಎಂದು ಹೇಳಲಾಗುತ್ತದೆ. ಇದು ಮಲೇರಿಯಾ, ಅಪಸ್ಮಾರ, ಚರ್ಮ ರೋಗಗಳು, ಅಸ್ತಮಾ, ಹೊಟ್ಟೆನೋವು, ಅತಿಸಾರ, ಸಂಧಿವಾತ, ಮಲೇರಿಯಾ, ಜ್ವರ, ಸ್ತ್ರೀರೋಗದಂತಹ ಸಮಸ್ಯೆಗಳಿಗೆ ಇದು ಮನೆಮದ್ದಾಗಿದೆ. ಆಯುರ್ವೇದವು ಶಿಫಾರಸು ಮಾಡಿದಂತೆ ತೊಗಟೆಯ ಪೇಸ್ಟ್ ಅನ್ನು ದೀರ್ಘಕಾಲದ ಚರ್ಮದ ಹುಣ್ಣುಗಳಿಗೆ ಹಚ್ಚಲಾಗುತ್ತದೆ. ಬಾಣಂತಿಯರಲ್ಲಿ ಎದೆಹಾಲನ್ನು ಹೆಚ್ಚಿಸಲು ಪ್ರಸವಾನಂತರದ ಪರಿಸ್ಥಿತಿಗಳಲ್ಲಿ ಇದನ್ನು ನೀಡಲಾಗುತ್ತದೆ. ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಪಾಲೆ ಮರದ ಕಷಾಯ ಕುಡಿಯುವದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ ವಾತವರಣ ತಡೆಯುವ ಶಕ್ತಿ ದೇಹಕ್ಕೆ ಸಿಗುತ್ತದೆ. ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು ಈ ಕಷಾಯ ಕುಡಿಯುವುದರಿಂದ ದೂರವಾಗುವುದು.