ಮಂಗಳೂರು : ಪರಶುರಾಮನ ಸೃಷ್ಟಿ ತುಳುನಾಡು ಆದಿ ಕಾಲದಿಂದಲೂ ದೈವ, ದೇವರ ನೆಲೆವೀಡು ಆಗಿದ್ದು ಆನೇಕ ಪವಾಡಗಳಿಗೆ ಸಾಕ್ಷಿಯಾಗಿದೆ. ದೇವರ ಬಗ್ಗೆ ನಂಬಿಕೆಯೇ ಮರೆಯಾಗುತ್ತಿರುವ ಈ ಹೊತ್ತಲ್ಲಿ ಅಗೋಚರ ಶಕ್ತಿ ದೈವ ತನ್ನ ಇರುವಿಕೆಯನ್ನು ತೋರಿಸಿಕೊಂಡಿದೆ ಎಂದು ಹೇಳಗಾಗಿದ್ದು ಇಂತಹುದೇ ದೈವ ಪವಾಡ ಕರಾವಳಿ ನಗರಿ ಮಂಗಳೂರಿನಲ್ಲಿ ನಡೆದಿದೆ.
ನಡುರಾತ್ರಿಯಲ್ಲಿ ಗೆಜ್ಜೆ ಸದ್ದಿನೊಂದಿಗೆ ಪ್ರಖರ ಬೆಳಕಿನಲ್ಲಿ ಬರುವ ದೈವದ ಸಂಚಾರ ಇದೇ ಮೊದಲ ಬಾರಿಗೆ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಕಣ್ಣಿಗೆ ಕಾಣದ ಅಗೋಚರ ಶಕ್ತಿಯೇ ಇಲ್ಲಿ ಗೆಜ್ಜೆ ಸದ್ದಿನೊಂದಿಗೆ ಸದ್ದು ಮಾಡಿದೆ ಎನ್ನುವುದು ಆಸ್ತಿಕರ ನಂಬಿಕೆ. ಮಂಗಳೂರು ನಗರದ ಯೆಯ್ಯಾಡಿ ಕೈಗಾರಿಕಾ ಸಂಕೀರ್ಣದ ಬಳಿಯ ಲಿಯೋ ಕ್ರಾಸ್ತಾ ಕಾಂಪೌಂಡಿನಲ್ಲಿ ಇಂತಹದ್ದೊಂದು ವಿಸ್ಮಯಕಾರಿ ವಿದ್ಯಮಾನ ಕಂಡುಬಂದಿದೆ. ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಕಳೆದ ಹಲವು ವರ್ಷಗಳಿಂದ ಆ ಪ್ರದೇಶದ ನಾಗನ ಬನಕ್ಕೆ ದೀಪ ಇಟ್ಟು ಆರಾಧನೆ ಮಾಡುತ್ತಿದ್ದರು. ಅದೇ ಸ್ಥಳದಲ್ಲಿ ಅವರಿಗೆ ಕಳೆದ ಐದಾರು ವರ್ಷಗಳಿಂದ ದೈವದ ಹೆಜ್ಜೆ ಸದ್ದು ಕೇಳಿಸಿತ್ತು.
ಯಾರೋ ಗೆಜ್ಜೆ ಸದ್ದಿನೊಂದಿಗೆ ನಡೆದು ಬರುವಂತೆ, ಹಿಂಬಾಲಿಸುವಂತಹ ಅನುಭವ ಆಗಿತ್ತು. ಈ ಬಗ್ಗೆ ಜ್ಯೋತಿಷ್ಯದಲ್ಲಿ ಕೇಳಿದ್ರೆ ನಾಗಬನದ ಪಕ್ಕದಲ್ಲೇ ಇರುವ ರೆಂಜೆಯ ಮರದಲ್ಲಿ ರಕ್ತೇಶ್ವರಿ ದೈವದ ಸಾನಿಧ್ಯವಿರುವ ಬಗ್ಗೆ ಹೇಳಿದ್ದರು. ಜ್ಯೋತಿಷಿಯ ಸೂಚನೆಯಂತೆ ರಕ್ತೇಶ್ವರಿ ದೈವಕ್ಕೂ ದೀಪ ಇಟ್ಟು ಆರಾಧನೆ ಮಾಡತೊಡಗಿದ್ದರು. ಆದರೆ, ಅಪರಾತ್ರಿಯಲ್ಲಿ ದೈವದ ಸಂಚಾರದ ನಡೆ ಗೆಜ್ಜೆ ಸದ್ದಿನೊಂದಿಗೆ, ಪ್ರಖರ ಬೆಳಕಿನೊಂದಿಗೆ ಕಾಣಿಸುತ್ತಿರುವುದು ವಿಸ್ಮಯ. ಅಪೂರ್ವ ವಿದ್ಯಮಾನವನ್ನು ದೀಪು ಶೆಟ್ಟಿಗಾರ್ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಆ ಜಾಗದಲ್ಲಿ ರೆಂಜೆಯ ಮರವನ್ನು ಬಿಟ್ಟರೆ ಬೇರೇನೂ ಇಲ್ಲದೇ ಇದ್ದರೂ, ಮಧ್ಯರಾತ್ರಿ ಕಳೆದ ಬಳಿಕ ಗೆಜ್ಜೆ ಸದ್ದು ಕೇಳಿಸುತ್ತಿರುವುದು ಭಾರಿ ಅಚ್ಚರಿಗೆ ಕಾರಣವಾಗಿದೆ. ಸ್ಥಳೀಯರು ದೈವದ ಸಂಚಾರವೆಂದೇ ನಂಬಿಕೊಂಡಿದ್ದು ಈ ವಿಡಿಯೋ ವೈರಲ್ ಆಗಿದೆ.