ತೆಲಂಗಾಣ ಹೋರಾಟಗಾರ, ಕ್ರಾಂತಿಗೀತೆ ಕವಿ ಗದ್ದರ್ ಇನ್ನಿಲ್ಲ..!

ಹೈದರಾಬಾದ್: ತೆಲಂಗಾಣದ ಖ್ಯಾತ ಕವಿ, ಜನಪದ ಹಾಡುಗಾರ ಗದ್ದರ್ ಅವರು ಭಾನುವಾರ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇತ್ತೀಚೆಗೆ ಅನಾರೋಗ್ಯ ಪೀಡಿತರಾಗಿದ್ದ ಗದ್ದರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 1948ರಲ್ಲಿ ತೆಲಂಗಾಣದ ತುಪ್ರಾನ್ ಎಂಬಲ್ಲಿ ಜನಿಸಿದ್ದ ಗದ್ದರ್ ಅವರ ಮೊದಲಿನ ಹೆಸರು ಗುಮ್ಮಡಿ ವಿಠಲ್ ರಾವ್ ಎಂದು. ಇವರ ಪತ್ನಿಯ ಹೆಸರು ವಿಮಲಾ ಗದ್ದರ್.

ಅವಿಭಜಿತ ಆಂಧ್ರಪ್ರದೇಶದಲ್ಲಿ ಅಂದು ಗದ್ದರ್ ಬಂದರೆ ಸಾಕು ಸಹಸ್ರ ಸಂಖ್ಯೆಯಲ್ಲಿ ಜನಸ್ತೋಮ ನೆರೆಯುತ್ತಿತ್ತು. ಅವರ ಹಾಡು ಕೇಳುವುದೇ ಒಂದು ಭಾಗ್ಯವೆಂಬಂತೆ ಭಾವಿಸಿದ್ದರು ಗದ್ದರ್ ಅಭಿಮಾನಿಗಳು. ಅಷ್ಟೊಂದು ಜನಪ್ರಿಯತೆಯನ್ನು ಈ ಜಾನಪದ ಕವಿ ಅದ್ಹೇಗೋ ಸಂಪಾದಿಸಿಬಿಟ್ಟಿದ್ದರು. ದೀನ ದಲಿತ, ಬಡವರು, ಹಿಂದುಳಿದ ವರ್ಗದವ ಜನರೆಂದರೆ ಗದ್ದರ್ ಗೆ ಎಲ್ಲಿಲ್ಲದ ಪ್ರೀತಿ. ಅವರ ಸಹಾಯಕ್ಕೆ ಧ್ವನಿಯಾಗುತ್ತಿದ್ದರು. ಆರಂಭದಲ್ಲಿ ಆಂಧ್ರಪ್ರದೇಶ, ಛತ್ತೀಸ್ಗಢದಲ್ಲಿ ನಕ್ಸಲೀಯರೊಂದಿಗೆ ನಂಟು ಹೊಂದಿದ್ದ ಗದ್ದರ್ ಮುಂದೆ ನಕ್ಸಲಿಸಂಗೆ ಸೇರಿಕೊಂಡು ಪೊಲೀಸರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ನಕ್ಸಲೈಟ್ ಪಟ್ಟಕಟ್ಟಿಕೊಂಡು ಜನರನ್ನು ಬಡಿದೆಬ್ಬಿಸುವ ಅನ್ಯಾಯದ ವಿರುದ್ಧ ಸಿಡಿದೇಳುವಂತೆ ಸಾಹಿತ್ಯ ರಚನೆ ಮಾಡಿ ತಮ್ಮದೇಯಾದ ಶೈಲಿಯಲ್ಲಿ ಹಾಡುತ್ತ ಸಂಚಾರಿ ಕವಿ ಎನ್ನಿಸಿಕೊಳ್ಳುತ್ತಾರೆ. ಆದರೆ, 2010 ರಲ್ಲಿ ನಕ್ಸಲಿಸಂ ಬೇಡವೆನ್ನಿಸಿ ಅದರಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತಾರೆ. ಇನ್ನು ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂಬ ಕೂಗು ಬಲವಾಗತೊಡಗಿದಾಗ ಗದ್ದರ್ ಅವರು ತಮ್ಮ ಹಾಡುಗಾರಿಕೆಯಿಂದಲೇ ಜನಸಾಮಾನ್ಯರಲ್ಲೂ ತೆಲಂಗಾಣ ಪ್ರತ್ಯೇಕ ರಾಜ್ಯದ ಕಿಚ್ಚು ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಗದ್ದರ್ ಅವರನ್ನು ಬಂಧಿಸಲು ಮುಂದಾಗುತ್ತೆ. ಆದರೆ, ಅದಾವುದಕ್ಕೂ ತಲೆಕೆಡಿಸಿಕೊಳ್ಳದ ಗದ್ದರ್ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟವನ್ನು ಮತ್ತಷ್ಟು ಜೋರು ಮಾಡುತ್ತಾರೆ. 2010ರ ವೇಳೆಗೆ ನಕ್ಸಲಿಸಂ ನಿಂದ ತಮ್ಮನ್ನು ತಾವು ಬೇರ್ಪಡಿಸಿಕೊಳ್ಳುವ ಮೂಲಕ ಅದರಿಂದ ದೂರ ಸರಿಯುತ್ತಾರೆ.

ಆದರೆ, ಗದ್ದರ್ ಒಬ್ಬ ನಕ್ಸಲೈಟ್ ಎಂಬ ಅವರ ಮೇಲಿನ ಆರೋಪ ದೂರವಾಗಲ್ಲ. ನಕ್ಸಲಿಸಂಗೆ ಗುಡ್ ಬೈ ಹೇಳಿದರೂ ಕೂಡ ಆ ಸಿದ್ಧಾಂತಕ್ಕೆ ಮಾರುಹೋಗಿದ್ದ ಗದ್ದರ್ ತಮ್ಮ ಸಾಹಿತ್ಯದಲ್ಲಿ ನಕ್ಸಲಿಸಂನ ವಾಸನೆ ಇರುತ್ತಿತ್ತು ಎನ್ನುವವರೂ ಇದ್ದಾರೆ. ತೆಲಂಗಾಣ ಪ್ರತ್ಯೇಕ ಹೋರಾಟದ ಅಂಗವಾಗಿ ದೇವೇಂದರ್ ಗೌಡ ಅವರ “ನವ ತೆಲಂಗಾಣ ಪ್ರಜಾ ಪಾರ್ಟಿ’ಯ ಸಕ್ರಿಯ ಕಾರ್ಯಕರ್ತರಾಗುತ್ತಾರೆ. ಹಾಗೆ ನೋಡಿದರೆ ಗದ್ದರ್ 1980 ರ ದಶಕದಲ್ಲಿ ಸಿಪಿಐ(ಎಂ) ಕಾರ್ಯಕರ್ತರಾಗಿದ್ದವರು. ಇನ್ನು ಗದ್ದರ್ ಅವರ ಸಾಹಿತ್ಯ ಚಿತ್ರಗೀತೆಗಳಾಗಿ ಇಂದಿಗೂ ಅಲ್ಲಿನ ಜನರ ನಾಲಗೆ ಮೇಲಿವೆ. 1979 ರಲ್ಲಿ “ಮಾ ಭೂಮಿ” ಚಿತ್ರಕ್ಕೆ “ಬಂದೇನಕ ಬಂದಿ ಕತ್ತಿ” ಎಂಬ ಇವರ ಹಾಡು ಜನಪ್ರಿಯತೆ ಗಳಿಸಿದ್ದರೆ ಮುಂದೆ 1995 ರಲ್ಲಿ ‘ಒರೆ ರಿಕ್ಷಾ’ ಚಿತ್ರಕ್ಕೆ ಗದ್ದರ್ ಅವರೇ ಹಾಡು ಬರೆದು ಧ್ವನಿ ನೀಡಿದ್ದರು. ಇವರ ಹಾಡಿಗೆ ಪ್ರತಿಷ್ಠಿತ “ನಂದಿ” ಪ್ರಶಸ್ತಿ ಸಂದಿದೆ! ಗದ್ದರ್ ಅವರ ನಿಧನಕ್ಕೆ ಗಣ್ಯರನೇಕರು ಶೋಕ ವ್ಯಕ್ತಪಡಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement