ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಜೆಡಿಎಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಹೀಗಾಗಿ ಜೆಡಿಎಸ್ ಪಕ್ಷದ 12 ಜನ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿದ ಅವರು, ನನ್ನ ಜತೆ ಯಾರೊಬ್ಬರೂ ಸಂಪರ್ಕದಲ್ಲಿಲ್ಲ. ನಾನು ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಸುಮ್ಮನೆ ಊಹಾಪೋಹಾ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಎಂತಹವರಾದರೂ ಈ ವಿಚಾರದಲ್ಲಿ ಹತಾಶರಾಗಿರುತ್ತಾರೆ. ಅವರ ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿನ ಆಂತರಿಕ ಸಮಸ್ಯೆಗಳು ಎಲ್ಲರಿಗೂ ಗೊತ್ತಿದೆ. ಈಗ ನಾನು ಆ ಬಗ್ಗೆ ಚರ್ಚೆ ಮಾಡುವುದಿಲ್ಲ.
ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಮಾಡುವ ಸಮಯದಿಂದಲೂ ಅವರ ಕುಟುಂಬದವರ ಹೇಳಿಕೆಗಳನ್ನು ಗಮನಿಸಿಕೊಂಡು ಬನ್ನಿ. ಅವರು ಬಿಜೆಪಿ ಜತೆ ಮೈತ್ರಿಯಾದರೂ ಮಾಡಿಕೊಳ್ಳಲಿ, ಪಕ್ಷವನ್ನು ವಿಲೀನವಾದರೂ ಮಾಡಿಕೊಳ್ಳಲಿ, ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದರು.