ಅಕ್ಟೋಬರ್ ತಿಂಗಳಿನಲ್ಲಿ ಶಾಲೆಗಳಿಗೆ ದಸರಾ ರಜೆ ಸಿಗಲಿದೆ ಎಂದು ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ದಸರಾ ರಜೆ ನೀಡುವ ಕುರಿತು ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ. ರಜೆಯಲ್ಲಿ ಕಡಿತ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಸಮಯದಲ್ಲಿ ನಡೆಯದ ತರಗತಿ ಸರಿದೂಗಿಸಲು ದಸರಾ ರಜೆ ಕಡಿತ ಮಾಡಲಾಗಿತ್ತು. ಆದರೆ ಈ ಬಾರಿ ಜನ ಜೀವನ ಸಾಮಾನ್ಯವಾಗಿದ್ದರೂ ಸಹ ರಜೆ ಕಡಿತ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ಈ ಬಾರಿ ಸಾಮಾನ್ಯ ಶಾಲೆಗಳಿಗೆ ಅಕ್ಟೋಬರ್ 8 ರಿಂದ 24ರ ತನಕ ದಸರಾ ರಜೆ ನೀಡಲಾಗಿದೆ. ವಿಶೇಷ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ಶಿಕ್ಷಕರು ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕಿದೆ.
ಸರ್ಕಾರ 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದಾಗಲೇ ದಸರಾ ರಜೆ ಕಡಿತಗೊಳ್ಳುವ ಸೂಚನೆ ಸಿಕ್ಕಿತ್ತು. ಈ ವರ್ಷ ಒಟ್ಟು ಲಭ್ಯವಾಗುವ ಶಾಲಾ ಕರ್ತವ್ಯದ ದಿನಗಳು 244. ಪರೀಕ್ಷೆ, ಮೌಲ್ಯಾಂಕನ ಕಾರ್ಯಗಳಿಗೆ 26 ದಿನಗಳು. ಪಠ್ಯೇತರ ಚಟುವಟಿಕೆ/ ಪಠ್ಯ ಚಟುವಿಕೆ/ ಸ್ಪರ್ಧೆಗಳ ನಿರ್ವಹಣೆಗಾಗಿ 24 ದಿನಗಳು. ಬೋಧನಾ-ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯದ ದಿನಗಳು 180 ಎಂದು ಪಟ್ಟಿ ಮಾಡಲಾಗಿತ್ತು.