ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದಸರಾ ಹಬ್ಬವನ್ನು ದೀಪಾವಳಿಗಿಂತ ಹೆಚ್ಚು ಸಂಭ್ರಮದಿಂದ ಆಚರಿಸುವ ಪದ್ಧತಿ ಇದೆ. ಅದು ಅಲ್ಲಿನ ಸಂಸ್ಕೃತಿ ಹಾಗೂ ಪರಂಪರೆ. ಈ ವೇಳೆ ಕೋಲ್ಕತ್ತ ನಗರದ ಮಹಾಜನತೆ ಊಟ-ಉಪಹಾರಕ್ಕಾಗಿ ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾರೆಂಬುದು ಅಂಕಿ-ಅಂಶಗಳ ಪ್ರಕಾರ ಗೊತ್ತಾಗಿದೆ. ದಸರಾ ಸಂಭ್ರಮದ ಕೇವಲ ಆರು ದಿನಗಳಲ್ಲಿ ಕೋಲ್ಕತ್ತಾದ ಹೈಫೈ ಡೈನಿಂಗ್ ಇರುವ ರೆಸ್ಟೋರಂಟ್‌ಗಳು ಗಳಿಸಿದ್ದು ಬರೋಬ್ಬರಿ ₹1,100 ಕೋಟಿ! ನಂಬಲು ಅಸಾಧ್ಯವಾದರೂ ಇದು ಸತ್ಯ. ಇನ್ನು ದಸರಾ ಸಂಭ್ರಮಕ್ಕಾಗಿಯೇ ಆಹಾರ ಪ್ರಿಯರನ್ನು ಆಕರ್ಷಿಸಲು ಕೋಲ್ಕತ್ತದ ರೆಸ್ಟೋರಂಟ್‌ಗಳ ಒಳಾಂಗಣವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿತ್ತು. ಉಳಿದೆಲ್ಲ ಸಂದರ್ಭಕ್ಕಿಂತ ದಸರಾ ಸಂಭ್ರಮದ ಸಂದರ್ಭದಲ್ಲಿ ತರಹೇವಾರಿ ಖಾದ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಕೋಲ್ಕತ್ತದ ಆಹಾರ ಪ್ರಿಯರು ರೆಸ್ಟೋರಂಟ್‌ಗಳಿಗೆ ಲಗ್ಗೆ ತಮ್ಮಿಷ್ಟದ ಭೂರಿ ಭೋಜನವನ್ನು ಭರ್ಜರಿಯಾಗಿ ಸವಿದಿದ್ದಾರೆ. ಇನ್ನು ಕಳೆದ ದಸರಾ ಹಬ್ಬಕ್ಕಿಂತ ಈ ಬಾರಿಯ ದಸರಾ ಹಬ್ಬದ ವೇಳೆ ರೆಸ್ಟೋರಂಟ್‌ಗಳು 20% ಹೆಚ್ಚು ಆದಾಯ ಗಳಿಸಿವೆ.