ಹಬ್ಬ ಎಂದರೆ ಎಲ್ಲರಿಗೂ ಸಂಭ್ರಮ. ಆದರೆ ಬೆಲೆ ಏರಿಕೆ ಇತ್ತೀಚಿನ ದಿನಗಳಲ್ಲಿ ಹಬ್ಬದ ಸಂಭ್ರಮ ಕಸಿದುಕೊಳ್ಳುವಂತೆ ಮಾಡಿದೆ. ಇದನ್ನು ಗಮನಿಸಿ ಆಂಧ್ರ ಪ್ರದೇಶದಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸುವ ‘ದೀಪಂ ಯೋಜನೆ’ಗೆ ಅಕ್ಟೋಬರ್ 31ರಂದು ಚಾಲನೆ ನೀಡಲಾಗುತ್ತದೆ.
ಚುನಾವಣೆ ಸಂದರ್ಭದಲ್ಲಿ ಟಿಡಿಪಿ ನೀಡಿದ್ದ ಆರು ಪ್ರಮುಖ ಭರವಸೆಗಳಲ್ಲಿ, ವರ್ಷಕ್ಕೆ ಮೂರು ಅಡುಗೆ ಅನಿಲ ಸಿಲಿಂಡರ್ಗಳನ್ನು ಉಚಿತವಾಗಿ ವಿತರಿಸುವ ಬಗ್ಗೆ ಹೇಳಿತ್ತು. ಇದೀಗ ಸಿಎಂ ಚಂದ್ರಬಾಬು ನಾಯ್ಡು ಅಮರಾವತಿಯ ಸಿಬ್ಬಂದಿ, ಸಚಿವಾಲಯದಲ್ಲಿ ಸಭೆ ನಡೆಸಿ ದೀಪಂ ಯೋಜನೆಗೆ ಚಾಲನೆ ನೀಡುವ ಬಗ್ಗೆ ಚರ್ಚಿಸಿದ್ದಾರೆ. ಆ ಮೂಲಕ ಆಂಧ್ರ ಪ್ರದೇಶದ ಅರ್ಹ ಮಹಿಳೆಯರು, ದೀಪಾವಳಿ ಹಬ್ಬದ ಸಡಗರದಲ್ಲಿ ಉಚಿತವಾಗಿ ಸಿಲಿಂಡರ್ ಪಡೆಯಲಿದ್ದಾರೆ.
ಈ ಸಂಬಂಧ ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಸಚಿವರುಗಳು, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ದೀಪಂ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿದೆ.